ಜೀನ್ಸ್ ಕುರಿತ ವಿವಾದ ಬಗೆಹರಿದ ನಂತರ ಟೂರ್ನಮೆಂಟ್ ಗೆ ಮರಳಿದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್
ನ್ಯೂಯಾರ್ಕ್: ವರ್ಲ್ಡ್ ಬ್ಲಿಟ್ಝ್ ಚಾಂಪಿಯನ್ ಶಿಪ್ ನ ಆಯೋಜಕರು ತಮ್ಮ ವಸ್ತ್ರಸಂಹಿತೆಯನ್ನು ಸಡಿಲಿಸಲು ಸಮ್ಮತಿಸಿದ ನಂತರ, ವಿಶ್ವ ಅಗ್ರ ಶ್ರೇಯಾಂಕದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಮತ್ತೆ ಟೂರ್ನಮೆಂಟ್ ಗೆ ಮರಳಿದ್ದಾರೆ. ಇದಕ್ಕೂ ಮುನ್ನ, ಅವರು ಜೀನ್ಸ್ ಬದಲಾಯಿಸಲು ನಿರಾಕರಿಸಿದ್ದರಿಂದ, ಅವರಿಗೆ ದಂಡ ವಿಧಿಸಿದ್ದ ಆಯೋಜಕರು, ತಡರಾತ್ರಿಯ ಮತ್ತೊಂದು ಸುತ್ತಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿದ್ದರು. ಹೀಗಾಗಿ ಮ್ಯಾಗ್ನಸ್ ಕಾರ್ಲ್ಸನ್ ಟೂರ್ನಮೆಂಟ್ ನಿಂದಲೇ ಹೊರ ನಡೆದಿದ್ದರು.
ವಿವಾದದ ಕುರಿತು ವಿಷಾದ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಚೆಸ್ ಫೆಡೆರೇಷನ್ ನ ಅಧ್ಯಕ್ಷ ಅರ್ಕಾಡಿ ದ್ವೋರ್ಕೊವಿಚ್, ಜಾಕೆಟ್ ನೊಂದಿಗೆ ಸೂಕ್ತ ಜೀನ್ಸ್ ದಿರಿಸು ಧರಿಸಲು ಹಾಗೂ ವಸ್ತ್ರ ಸಂಹಿತೆಯಲ್ಲಿ ಇನ್ನಿತರ ಸೂಕ್ಷ್ಮ ಬದಲಾವಣೆಗಳಿಗೆ ಅವಕಾಶ ನೀಡುವುದನ್ನು ಪರಿಗಣಿಸುವ ನಿರ್ಧಾರವನ್ನು ವರ್ಲ್ಡ್ ಬ್ಲಿಟ್ಝ್ ಚಾಂಪಿಯನ್ ಶಿಪ್ ಅಧಿಕಾರಿಗಳಿಗೆ ಬಿಟ್ಟುಕೊಟ್ಟಿದ್ದೇನೆ ಎಂದು ರವಿವಾರ ಬಿಡುಗಡೆ ಮಾಡಿರುವ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ನಡುವೆ, ರವಿವಾರ ಸಾಮಾಜಿಕ ಮಾಧ್ಯಮಮದಲ್ಲಿ ವಿಡಿಯೊವೊಂದನ್ನು ಪೊಸ್ಟ್ ಮಾಡಿರುವ ಮ್ಯಾಗ್ನಸ್ ಕಾರ್ಲ್ಸನ್, ಸೋಮವಾರ ವರ್ಲ್ಡ್ ಬ್ಲಿಟ್ಝ್ ಚಾಂಪಿಯನ್ ಶಿಪ್ ಪುನಾರಂಭಗೊಂಡಾಗ ಆಟವಾಡುತ್ತೇನೆ ಹಾಗೂ ಜೀನ್ಸ್ ಧರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.