ಆಸ್ಪತ್ರೆಯಿಂದ ಬಿಡುಗಡೆಯಾದ ವಿನೋದ್ ಕಾಂಬ್ಳಿ
ಮುಂಬೈ : ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿರುವ ಭಾರತದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ ಅವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಿ.21ರಂದು ಥಾಣೆಯ ಭಿವಂಡಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಭಾರತ ಕ್ರಿಕೆಟ್ ತಂಡದ ಹೊಸ ಏಕದಿನ ಜರ್ಸಿ ಧರಿಸಿ ಆಸ್ಪತ್ರೆಯಿಂದ ನಡೆದುಕೊಂಡು ಹೊರ ಬಂದಿರುವ ಕಾಂಬ್ಳಿ ಅವರನ್ನು ಹಿತೈಷಿಗಳು ಬರಮಾಡಿಕೊಂಡರು. ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಕೆಲವು ಹೊಡೆತಗಳನ್ನು ಆಡಿದ ಕಾಂಬ್ಳಿ ಅವರನ್ನು ಕ್ರಿಕೆಟ್ ಪ್ರೇಮಿಗಳು ಪ್ರಶಂಶಿಸಿದರು. ಆಕೃತಿ ಆಸ್ಪತ್ರೆಯ ನಿರ್ದೇಶಕ, ಕಾಂಬ್ಳಿ ಅವರ ಕಟ್ಟಾ ಅಭಿಮಾನಿ ಡಾ.ಶೈಲೇಶ್ ಠಾಕೂರ್ ಅವರು ಕಾರಿನಲ್ಲಿ ಕಾಂಬ್ಳಿ ಅವರನ್ನು ಕೂರಿಸಿಕೊಂಡು ಬಾಂದ್ರಾದಲ್ಲಿರುವ ಅವರ ಮನೆಗೆ ಕರೆದೊಯ್ದರು.
ಇದೀಗ ಕಾಂಬ್ಳಿ ಚೇತರಿಸಿಕೊಂಡಿದ್ದಾರೆ. ನಾನು ಅವರನ್ನು ಅವರ ಮನೆಗೆ ಬಿಟ್ಟುಬಂದೆ ಎಂದು ಠಾಕೂರ್ ಪಿಟಿಐಗೆ ತಿಳಿಸಿದರು.
52ರ ಹರೆಯದ ಮುಂಬೈ ಕ್ರಿಕೆಟಿಗ ಕಾಂಬ್ಳಿ ಅವರು 1991ರಿಂದ 2000ದ ತನಕ 121 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 54.20ರ ಸರಾಸರಿಯಲ್ಲಿ ಕೇವಲ 17 ಟೆಸ್ಟ್ ಪಂದ್ಯಗಳಲ್ಲಿ 1,084 ರನ್ ಗಳಿಸಿದ್ದರು. 1993ರಲ್ಲಿ ಇಂಗ್ಲೆಂಡ್ ಹಾಗೂ ಝಿಂಬಾಬ್ವೆ ವಿರುದ್ಧ ದ್ವಿಶತಕ ಸಹಿತ ಒಟ್ಟು 4 ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಎಡಗೈ ಬ್ಯಾಟರ್ 104 ಏಕದಿನ ಪಂದ್ಯಗಳಲ್ಲಿ 32ರ ಸರಾಸರಿಯಲ್ಲಿ 2 ಶತಕ ಹಾಗೂ 14 ಅರ್ಧಶತಕಗಳ ಸಹಿತ 2,477 ರನ್ ಗಳಿಸಿದ್ದರು.