ಐದನೇ ಟೆಸ್ಟ್ | ಭಾರತ 185 ರನ್‌ಗೆ ಆಲೌಟ್
ಸಿಡ್ನಿ : ಸರಣಿ ನಿರ್ಣಾಯಕ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಕೊನೆಯ ಎಸೆತದಲ್ಲಿ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ಜಾಜಾ ವಿಕೆಟ್ ಕಳೆದುಕೊಂಡಿದ್ದರೂ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಟಗಾರರು ದಿನಪೂರ್ತಿ ಮೇಲುಗೈ ಸಾಧಿಸಿದ್ದಾರೆ.
ಟೆಸ್ಟ್ ಪಂದ್ಯದ ಮೊದಲ ದಿನವೇ ಒಟ್ಟು 11 ವಿಕೆಟ್‌ಗಳು ಪತನಗೊಂಡಿದ್ದು, ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ.
ಭಾರತೀಯ ಕ್ರಿಕೆಟ್‌ನ ಅಭೂತಪೂರ್ವ ಹೆಜ್ಜೆಯೊಂದರಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಉಪ ನಾಯಕ ಜಸ್‌ಪ್ರಿತ್ ಬುಮ್ರಾಗೆ ತಂಡದ ನಾಯಕತ್ವ ವಹಿಸಲಾಯಿತು.
ಶುಕ್ರವಾರ ಟಾಸ್ ಜಯಿಸಿದ ಬುಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಸ್ಕಾಟ್ ಬೋಲ್ಯಾಂಡ್(4-31) ನೇತೃತ್ವದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಆಸ್ಟ್ರೇಲಿಯ ತಂಡವು ಭಾರತ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 185 ರನ್‌ಗೆ ಆಲೌಟ್ ಮಾಡಿತು. ಬೋಲ್ಯಾಂಡ್ 4 ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಟಾರ್ಕ್(3-49) ಹಾಗೂ ಕಮಿನ್ಸ್ (2-37)ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ. ಸ್ಯಾಮ್ ಕಾನ್‌ಸ್ಟಾಸ್ ಔಟಾಗದೆ 7 ರನ್ ಗಳಿಸಿದ್ದಾರೆ. ಅನುಭವಿ ಆಟಗಾರ ಖ್ವಾಜಾ ದಿನದ ಕೊನೆಯ ಎಸೆತದಲ್ಲಿ ಬುಮ್ರಾ ಬೌಲಿಂಗ್‌ನಲ್ಲಿ ಕೆ.ಎಲ್.ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾದರು.
ಭಾರತದ ಬ್ಯಾಟರ್‌ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಭಾರತದ ಪರ ರಿಷಭ್ ಪಂತ್(40 ರನ್, 98 ಎಸೆತ, 3 ಬೌಂಡರಿ, 1 ಸಿಕ್ಸರ್) ಒಂದಷ್ಟು ಪ್ರತಿರೋಧ ಒಡ್ಡಿ ಟಾಪ್ ಸ್ಕೋರರ್ ಎನಿಸಿಕೊಂಡರು. ಬೋಲ್ಯಾಂಡ್ ಹೊಸ ಹಾಗೂ ಹಳೆ ಚೆಂಡಿನಲ್ಲಿ ಅಮೋಘ ಬೌಲಿಂಗ್ ಮಾಡಿ ಭಾರತದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅಸ್ಥಿರ ಬೌನ್ಸ್ ಹೊಂದಿದ್ದ ಸಿಡ್ನಿ ಪಿಚ್‌ನಲ್ಲಿ ಬೋಲ್ಯಾಂಡ್ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.
ಭಾರತ ತಂಡವು 17 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್(4 ರನ್) ಹಾಗೂ ಯಶಸ್ವಿ ಜೈಸ್ವಾಲ್(10 ರನ್) ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ರೋಹಿತ್ ಶರ್ಮಾ ಬದಲಿಗೆ ಆಡುವ 11ರ ಬಳಗ ಸೇರಿದ್ದ ಶುಭಮನ್ ಗಿಲ್(20 ರನ್, 64 ಎಸೆತ) ಅವರು ವಿರಾಟ್ ಕೊಹ್ಲಿ (17 ರನ್)ಅವರೊಂದಿಗೆ 3ನೇ ವಿಕೆಟ್‌ನಲ್ಲಿ 40 ರನ್ ಸೇರಿಸಿ ತಂಡವನ್ನು ಆಧರಿಸಿದರು. ಉತ್ತಮ ಆರಂಭ ಪಡೆದಿದ್ದ ಗಿಲ್ ವಿಕೆಟನ್ನು ಕಬಳಿಸಿದ ಸ್ಪಿನ್ನರ್ ಲಿಯೊನ್ ಈ ಜೋಡಿಯನ್ನು ಬೇರ್ಪಡಿಸಿದರು.
ಗಿಲ್ ಪ್ರಸಕ್ತ ಸರಣಿಯಲ್ಲಿ 4 ಇನಿಂಗ್ಸ್‌ಗಳಲ್ಲಿ 3 ಬಾರಿ 20 ರನ್ ಗಳಿಸಿದ್ದರೂ 31 ರನ್ ಗಡಿ ದಾಟುವಲ್ಲಿ ವಿಫಲರಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಜೀವದಾನ ಪಡೆದಿದ್ದರೂ ಆ ನಂತರ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದಾಗ ಭಾರತ 72 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು. ಬೋಲ್ಯಾಂಡ್ 6 ಟೆಸ್ಟ್ ಇನಿಂಗ್ಸ್‌ಗಳಲ್ಲಿ 4ನೇ ಬಾರಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪ್ರಸಕ್ತ ಸರಣಿಯಲ್ಲಿ ರನ್‌ಗಾಗಿ ಪರದಾಟ ಮುಂದುವರಿಸಿದ ಕೊಹ್ಲಿ 8 ಇನಿಂಗ್ಸ್‌ಗಳಲ್ಲಿ 26.28ರ ಸರಾಸರಿಯಲ್ಲಿ ಕೇವಲ 184 ರನ್ ಗಳಿಸಿದ್ದಾರೆ.
69 ಎಸೆತಗಳಲ್ಲಿ 17 ರನ್ ಗಳಿಸಿ ಕೊಹ್ಲಿ ಔಟಾದಾಗ ರವೀಂದ್ರ ಜಡೇಜ(26 ರನ್) ಅವರೊಂದಿಗೆ ಕೈ ಜೋಡಿಸಿದ ಪಂತ್ ಅವರು 5ನೇ ವಿಕೆಟ್‌ನಲ್ಲಿ 151 ಎಸೆತಗಳಲ್ಲಿ 48 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಆಗ ಬೋಲ್ಯಾಂಡ್ ಅವರು ಭಾರತಕ್ಕೆ ಮತ್ತೊಮ್ಮೆ ಕಂಟಕವಾದರು. ಪಂತ್ ಹಾಗೂ ನಿತೀಶ್ ಕುಮಾರ್ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದರು. ಬೋಲ್ಯಾಂಡ್ ಹ್ಯಾಟ್ರಿಕ್ ವಿಕೆಟ್ ಪಡೆಯಲು ವಿಫಲರಾಗಿದ್ದರೂ ಭಾರತಕ್ಕೆ ಭೀತಿ ಹುಟ್ಟಿಸುವಲ್ಲಿ ಶಕ್ತರಾದರು. 4ನೇ ಟೆಸ್ಟ್ ಪಂದ್ಯದ ಶತಕವೀರ ನಿತೀಶ್ ಕುಮಾರ್ ತಾನೆದುರಿಸಿದ ಮೊದಲ ಎಸೆತದಲ್ಲೇ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದರು.
ಸ್ಟಾರ್ಕ್ ಹಾಗೂ ಕಮಿನ್ಸ್ ಭಾರತದ ಕೆಳ ಸರದಿ ಬ್ಯಾಟರ್‌ಗಳನ್ನು ಕಾಡಿದರು. ಸ್ಟಾರ್ಕ್ ಅವರು ಜಡೇಜರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಜಡೇಜ ಹಾಗೂ ಸುಂದರ್(14 ರನ್)ಬೆನ್ನು ಬೆನ್ನಿಗೆ ಔಟಾದರು.
ಪ್ರಸಿದ್ಧ ಕೃಷ್ಣ(3 ರನ್)ಕೂಡ ಬೇಗನೆ ಔಟಾದರು. ನಾಯಕ ಬುಮ್ರಾ 17 ಎಸೆತಗಳಲ್ಲಿ 22 ರನ್ ಗಳಿಸಿದರು. ಬುಮ್ರಾ ವಿಕೆಟನ್ನು ಪಡೆದ ಕಮಿನ್ಸ್ ಭಾರತದ ಮೊದಲ ಇನಿಂಗ್ಸ್ ಅನ್ನು 185 ರನ್‌ಗೆ ನಿಯಂತ್ರಿಸಿದರು.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.