ಪೋಲ್ಯಾಂಡ್‌ನ್ನು ಸೋಲಿಸಿ ಯುನೈಟೆಡ್ ಕಪ್ ಪ್ರಶಸ್ತಿ ಗೆದ್ದ ಅಮೆರಿಕ
ಸಿಡ್ನಿ: ಸಿಡ್ನಿಯಲ್ಲಿ ನಡೆದ ಯುನೈಟೆಡ್ ಕಪ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ರವಿವಾರ ಪೋಲ್ಯಾಂಡ್‌ನ್ನು ಸೋಲಿಸಿದ ಅಮೆರಿಕ ಪ್ರಶಸ್ತಿ ಗೆದ್ದಿದೆ.
ಫೈನಲ್ ನ ಮೊದಲ ಪಂದ್ಯದಲ್ಲಿ ಅಮೆರಿಕದ ಕೋಕೊ ಗೌಫ್ ಪೋಲ್ಯಾಂಡ್ ನ ಇಗಾ ಸ್ವಿಯಾಟೆಕ್ ರನ್ನು ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಪೋಲ್ಯಾಂಡ್ ನ ಹ್ಯೂಬರ್ಟ್ ಹರ್ಕಝ್‌ರನ್ನು ಮಣಿಸಿದರು.
ಗೌಫ್, ಸ್ವಿಯಾಟೆಕ್ ರನ್ನು ಒಂದು ಗಂಟೆ 51 ನಿಮಿಷಗಳಲ್ಲಿ 6-4, 6-4 ಸೆಟ್‌ಗಳಿಂದ ಸೋಲಿಸಿದರು. ಬಳಿಕ, ಫ್ರಿಟ್ಝ್, ಎದುರಾಳಿ ಹ್ಯೂಬರ್ಟ್‌ರನ್ನು 6-4, 5-7, 7-6 (7/4) ಸೆಟ್‌ಗಳಿಂದ ಪರಾಭವಗೊಳಿಸಿದರು.
ಈ ಮೂಲಕ ಮಿಶ್ರ-ತಂಡಗಳು ಭಾಗವಹಿಸುವ ಪಂದ್ಯಾವಳಿಯನ್ನು ಅಮೆರಿಕವು ಮೂರು ವರ್ಷಗಳಲ್ಲಿ ಎರಡು ಬಾರಿ ಗೆದ್ದಂತಾಗಿದೆ. ಇದಕ್ಕೂ ಮೊದಲು ಅದು 2023ರಲ್ಲಿ ನಡೆದ ಉದ್ಘಾಟಾನಾ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿತ್ತು.
ಪೋಲ್ಯಾಂಡ್ ಯುನೈಟೆಡ್ ಕಪ್ ಫೈನಲ್ ನಲ್ಲಿ ಎರಡನೇ ಬಾರಿ ಸೋತಂತಾಗಿದೆ. ಅದು 12 ತಿಂಗಳುಗಳ ಹಿಂದೆ ಜರ್ಮನಿ ವಿರುದ್ಧ ಸೋಲನುಭವಿಸಿತ್ತು.
ಗೌಫ್ ಈ ವಾರ ತನ್ನ ಎಲ್ಲಾ ಆರು ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಗಳನ್ನು ಗೆದ್ದಿದ್ದಾರೆ.