ರಾಹುಲ್ ದ್ರಾವಿಡ್ ಇರುವ ತನಕ ಎಲ್ಲವೂ ಸರಿಯಿತ್ತು, ಈಗ ಹಠಾತ್ತನೇ ಏನಾಗಿದೆ?
ಹೊಸದಿಲ್ಲಿ: ರಾಹುಲ್ ದ್ರಾವಿಡ್ ಮಾರ್ಗದರ್ಶನ ಹಾಗೂ ರೋಹಿತ್ ಶರ್ಮಾರ ನಾಯಕತ್ವದಲ್ಲಿ ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಹಠಾತ್ತನೆ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಹರ್ಭಜನ್ ಸಿಂಗ್, ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ತಂಡದ ಪರದಾಟವನ್ನು ಉಲ್ಲೇಖಿಸಿದ್ದಾರೆ. ಆಟಗಾರರ ಆಯ್ಕೆಯ ವೇಳೆ ಖ್ಯಾತಿಗಿಂತ ಪ್ರದರ್ಶನಕ್ಕೆ ಆದ್ಯತೆ ನೀಡುವಂತೆ ಟೀಮ್ ಮ್ಯಾನೇಜ್ಮೆಂಟ್ಗೆ ವಿನಂತಿಸಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಆಗಿ ಇರುವ ತನಕ ಎಲ್ಲವೂ ಸರಿಯಾಗಿತ್ತು. ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಆದರೆ ಈಗ ಏಕಾಏಕಿ ಏನಾಗಿದೆ ಎಂದು ಗೌತಮ್ ಗಂಭೀರ್ ಕೋಚ್ ಹುದ್ದೆವಹಿಸಿಕೊಂಡ ನಂತರ ತಂಡದ ಕಳಾಹೀನ ಪ್ರದರ್ಶನವನ್ನು ಬೆಟ್ಟು ಮಾಡಿ ಹರ್ಭಜನ್ ಪ್ರಶ್ನಿಸಿದ್ದಾರೆ.
ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದರೆ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದೆ ಎಂದು ಹರ್ಭಜನ್ ಬೆಟ್ಟು ಮಾಡಿದರು.
ಭಾರತ ತಂಡವು ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ್ದ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಮುಖಭಂಗಕ್ಕೆ ಒಳಗಾದ ನಂತರ ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ಅಂತರದಿಂದ ಸೋಲುಂಡಿತು. ಆಸ್ಟ್ರೇಲಿಯ ತಂಡವು 10 ವರ್ಷಗಳ ನಂತರ ಟ್ರೋಫಿಯನ್ನು ವಶಪಡಿಸಿಕೊಂಡಿತು.
ಕಳೆದ ಆರು ತಿಂಗಳುಗಳಿಂದ ನಾವು ಶ್ರೀಲಂಕಾ ವಿರುದ್ಧ ಸೋತಿದ್ದೇವೆ. ನ್ಯೂಝಿಲ್ಯಾಂಡ್ ವಿರುದ್ದ ವೈಟ್ವಾಶ್ ಎದುರಿಸಿದ್ದೆವು. ಇದೀಗ ಆಸ್ಟ್ರೇಲಿಯದ ಎದುರು 1-3 ಅಂತರದಿಂದ ಸರಣಿ ಸೋತಿದ್ದೇವೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಸ್ಟ್ರೇಲಿಯ ವಿರುದ್ಧ ಸರಣಿಯ ವೇಳೆ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಕೊಹ್ಲಿ 8 ಇನಿಂಗ್ಸ್ಗಳಲ್ಲಿ ಪದೇ ಪದೇ ಬೋಲ್ಯಾಂಡ್ಗೆ ವಿಕೆಟ್ ಒಪ್ಪಿಸಿ 23.75ರ ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದ್ದರು. ರೋಹಿತ್ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 31 ರನ್ ಗಳಿಸಿದ್ದರು.
ಪ್ರತಿಯೊಬ್ಬ ಆಟಗಾರನಿಗೂ ಖ್ಯಾತಿ ಇದೆ. ಇದು ಪ್ರಮುಖ ವಿಷಯವಾಗಿದ್ದರೆ, ಭಾರತದ ಅತಿ ದೊಡ್ಡ ಮ್ಯಾಚ್ ವಿನ್ನರ್ ಗಳಾದ ಕಪಿಲ್ ದೇವ್, ಅನಿಲ್ ಕುಂಬ್ಳೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು. ಬಿಸಿಸಿಐ ಹಾಗೂ ಆಯ್ಕೆದಾರರು ಆಟಗಾರರ ಆಯ್ಕೆಯ ವಿಷಯದಲ್ಲಿ ಹಿಡಿತ ಸಾಧಿಸಬೇಕು. ಭಾರತ ತಂಡವು ಸೂಪರ್ಸ್ಟಾರ್ ಧೋರಣೆಯನ್ನು ಬಿಡಬೇಕು. ಅಭಿಮನ್ಯು ಈಶ್ವರನ್ ಹಾಗೂ ಸರ್ಫರಾಝ್ ಖಾನ್ ತಂಡದಲ್ಲಿದ್ದರೂ ಆಡುವ ಅವಕಾಶ ನೀಡಲಿಲ್ಲ ಎಂದರು.