‘ಲಾರಿಯಸ್ ವರ್ಷದ ಪುನರಾಗಮನ’ ಪ್ರಶಸ್ತಿಗೆ ರಿಷಭ್ ಪಂತ್ ನಾಮನಿರ್ದೇಶನ
ರಿಷಭ್ ಪಂತ್ | PC : PTI
ಹೊಸದಿಲ್ಲಿ: ‘ಲಾರಿಯಸ್ ವರ್ಷದ ಪುನರಾಗಮನ 2025’ ಪ್ರಶಸ್ತಿಗೆ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಸ್ಪರ್ಧೆಯಲ್ಲಿದ್ದಾರೆ. ಕ್ರೀಡೆಯಲ್ಲಿ ಪ್ರತಿಕೂಲ ಪರಿಸ್ಥಿತಿಯಿಂದ ಹೊರಬಂದು ಮತ್ತೊಮ್ಮೆ ಅತ್ಯುತ್ತಮ ನಿರ್ವಹಣೆ ನೀಡುವ ಕ್ರೀಡಾಪಟುಗಳಿಗೆ ಈ ಜಾಗತಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿಕೆಟ್ ಕೀಪರ್-ಬ್ಯಾಟರ್ ಪಂತ್ 2022ರ ಡಿಸೆಂಬರ್ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚೇತರಿಸಿಕೊಂಡು 2024ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಿದ್ದಾರೆ.
ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಬಳಿಕ, ಅವರು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ನಲ್ಲಿ ಶತಕ ಬಾರಿಸಿದ್ದಾರೆ. ಆ ಮೂಲಕ ಭಾರತೀಯ ವಿಕೆಟ್ಕೀಪರ್-ಬ್ಯಾಟರ್ ಒಬ್ಬರ ಗರಿಷ್ಠ ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬಳಿಕ, ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್ 2025ರ ಋತುವಿಗಾಗಿ ಲಕ್ನೊ ಸೂಪರ್ ಜಯಂಟ್ಸ್ ತಂಡವು ಅವರನ್ನು 27 ಕೋಟಿ ರೂ.ಗೆ ಖರೀದಿಸಿದೆ.
‘‘ನನ್ನ ಕತೆ ಮುಗಿಯಿತು ಎಂದು ನಾನು ಅಂದುಕೊಂಡಿದ್ದೆ. ಆದರೆ, ಮಾನಸಿಕ ಮತ್ತು ದೈಹಿಕ ಹೋರಾಟದ ಫಲವಾಗಿ ನನ್ನ ಮರುಪ್ರವೇಶವಾಗಿದೆ. ಈ ಪ್ರಶಸ್ತಿಗೆ ನನ್ನ ನಾಮಕರಣವಾಗಿರುವುದು ನಂಬಿಕೆ ಮತ್ತು ಕಠಿಣ ಪರಿಶ್ರಮಕ್ಕೆ ಲಭಿಸಿದ ಜಯವಾಗಿದೆ’’ ಎಂದು ಪಂತ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ವಿವಿಧ ಕ್ರೀಡೆಗಳಿಂದ ಇತರ ಐದು ಮಂದಿ ಈ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ. ಎಪ್ರಿಲ್ 21ರಂದು ಸ್ಪೇನ್ನ ಮ್ಯಾಡ್ರಿಡ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.