ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲು ತಂಡಗಳ ನಡುವೆ ಹೆಚ್ಚಿದ ಸ್ಪರ್ಧೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಈಗ ನಡೆಯುತ್ತಿರುವ 2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಲು ತಂಡಗಳ ನಡುವೆ ಸ್ಪರ್ಧೆ ಜೋರಾಗಿದ್ದು, ನೆಟ್ ರನ್‌ರೇಟ್ ಹೆಚ್ಚಿಸಿಕೊಳ್ಳಲು ದೊಡ್ಡ ಅಂತರದ ಗೆಲುವಿನತ್ತ ಚಿತ್ತ ಹರಿಸಿವೆ.
8 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಗುಜರಾತ್ ಟೈಟಾನ್ಸ್ +1.104 ನೆಟ್ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ಕ್ರಮವಾಗಿ 2ನೇ, 3ನೇ ಹಾಗೂ 4ನೇ ಸ್ಥಾನಗಳನ್ನು ಪಡೆದಿವೆ. ಡೆಲ್ಲಿ ತಂಡವು 7 ಪಂದ್ಯಗಳಲ್ಲಿ +0.589 ನೆಟ್ ರನ್ ರೇಟ್ ನೊಂದಿಗೆ ಒಟ್ಟು 10 ಅಂಕ ಗಳಿಸಿದೆ. ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ತಲಾ 10 ಅಂಕಗಳನ್ನು ಹೊಂದಿದ್ದು, ಕ್ರಮವಾಗಿ +0.472 ಹಾಗೂ +0.177 ನೆಟ್‌ರನ್‌ರೇಟ್ ಹೊಂದಿವೆ.
ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯ 4 ಸ್ಥಾನಗಳನ್ನು ಪಡೆದಿವೆ. ಕೆಕೆಆರ್ ಆರಂಕ ಗಳಿಸಿದರೆ, ಇತರ 3 ಫ್ರಾಂಚೈಸಿಗಳು ಈ ತನಕ ಕೇವಲ 4 ಅಂಕಗಳನ್ನು ಗಳಿಸಿವೆ. ಸದ್ಯಕ್ಕೆ ಎಲ್ಲ ತಂಡಗಳು ಐಪಿಎಲ್ ಪ್ಲೇ ಆಫ್‌ಗೆ ತೇರ್ಗಡೆಯಾಗುವ ಅವಕಾಶ ಹೊಂದಿವೆ.
►ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ತಂಡಗಳು ಏನು ಮಾಡಬೇಕೆಂಬ ಕುರಿತು ಒಂದು ನೋಟ ಇಲ್ಲಿದೆ.
ಗುಜರಾತ್ ಟೈಟಾನ್ಸ್: ಈಗಿನ ಶ್ರೇಷ್ಠ ನೆಟ್ ರನ್‌ರೇಟ್ ಅನ್ನು ಪರಿಗಣಿಸಿದರೆ ಗುಜರಾತ್ ತಂಡವು ಇನ್ನುಳಿದ 6 ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸುವ ಅಗತ್ಯವಿದೆ. ಸಾಯಿ ಸುದರ್ಶನ್ ಹಾಗೂ ಪ್ರಸಿದ್ಧ ಕೃಷ್ಣ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದು ಇದು ಎಲ್ಲ ವಿಭಾಗಗಳಲ್ಲಿ ಗುಜರಾತ್ ತಂಡದ ಪ್ರಾಬಲ್ಯವನ್ನು ಸೂಚಿಸುತ್ತಿದೆ. ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್ ಮೂಲದ ಫ್ರಾಂಚೈಸಿಯು ಈ ವರ್ಷ ಅಮೋಘ ಪ್ರದರ್ಶನ ನೀಡುತ್ತಿದೆ. ಗುಜರಾತ್ ತಂಡವು ಇನ್ನುಳಿದ ಪಂದ್ಯಗಳಲ್ಲಿ ರಾಜಸ್ಥಾನ, ಹೈದರಾಬಾದ್, ಡೆಲ್ಲಿ, ಲಕ್ನೊ ಹಾಗೂ ಚೆನ್ನೈ ತಂಡಗಳನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು ಇನ್ನುಳಿದ 7 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸುವ ಅಗತ್ಯವಿದೆ. ಡೆಲ್ಲಿಯ ರನ್‌ರೇಟ್ ಲೀಗ್‌ನಲ್ಲಿ 2ನೇ ಶ್ರೇಷ್ಠಮಟ್ಟದಲ್ಲಿದೆ. ಇದು ಪ್ಲೇ ಆಫ್‌ಗೆ ಸ್ಥಾನ ಗಿಟ್ಟಿಸಲು ನಿಶ್ಚಿತವಾಗಿ ನಿರ್ಣಾಯಕ ಪಾತ್ರವಹಿಸಲಿದೆ. ಡೆಲ್ಲಿ ತಂಡವು ಇನ್ನುಳಿದ ಪಂದ್ಯಗಳಲ್ಲಿ ಲಕ್ನೊ, ಆರ್‌ಸಿಬಿ, ಕೆಕೆಆರ್, ಎಸ್‌ಆರ್‌ಎಚ್, ಪಂಜಾಬ್ ಕಿಂಗ್ಸ್, ಗುಜರಾತ್ ಹಾಗೂ ಮುಂಬೈ ತಂಡಗಳನ್ನು ಎದುರಿಸಲಿದೆ.
ಆರ್‌ಸಿಬಿ: ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು 8 ಪಂದ್ಯಗಳಲ್ಲಿ ಒಟ್ಟು 10 ಅಂಕ ಗಳಿಸಿದ್ದು, ಪ್ಲೇ ಆಫ್‌ಗೆ ಸ್ಥಾನ ಗಿಟ್ಟಿಸಲು ಇನ್ನುಳಿದ 6 ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ತನ್ನ ಇನ್ನುಳಿದ ಪಂದ್ಯಗಳಲ್ಲಿ ರಾಜಸ್ಥಾನ, ಡೆಲ್ಲಿ, ಸಿಎಸ್‌ಕೆ, ಲಕ್ನೊ, ಹೈದರಾಬಾದ್ ಹಾಗೂ ಕೆಕೆಆರ್ ತಂಡಗಳನ್ನು ಎದುರಿಸಲಿದೆ.
ಪಂಜಾಬ್ ಕಿಂಗ್ಸ್, ಲಕ್ನೊ ಸೂಪರ್ ಕಿಂಗ್ಸ್: ಪ್ಲೇ ಆಫ್‌ನಲ್ಲಿ ಸ್ಪರ್ಧೆಯಲ್ಲಿರಲು ಉಭಯ ತಂಡಗಳು ಕೊನೆಯ 6 ಪಂದ್ಯಗಳಲ್ಲಿ 3ರಲ್ಲಿ ಜಯ ದಾಖಲಿಸುವತ್ತ ಚಿತ್ತ ಹರಿಸಿವೆ. ಆರ್‌ಸಿಬಿಯ +0.472 ನೆಟ್ ರನ್ ರೇಟ್ ಗೆ ಹೋಲಿಸಿದರೆ ಎರಡೂ ತಂಡಗಳು ಕಡಿಮೆ ರನ್ ರೇಟ್ ಹೊಂದಿವೆ. ಪಂಜಾಬ್ ತಂಡವು +0.177, ಲಕ್ನೊ +0.088 ನೆಟ್ ರನ್ ರೇಟ್ ನೊಂದಿಗೆ ತಲಾ 10 ಅಂಕ ಗಳಿಸಿವೆ. ತೀವ್ರ ಸ್ಪರ್ಧೆಯನ್ನು ಪರಿಗಣಿಸಿದರೆ ಉಭಯ ತಂಡಗಳು ದೊಡ್ಡ ಅಂತರದ ಗೆಲುವು ದಾಖಲಿಸಿದರೆ ಉತ್ತಮ ಅವಕಾಶ ಪಡೆಯಲಿವೆ. ಪಂಜಾಬ್ ತಂಡವು ತನ್ನ ಇನ್ನುಳಿದ ಪಂದ್ಯಗಳಲ್ಲಿ ಸಿಎಸ್‌ಕೆ, ಲಕ್ನೊ, ಡೆಲ್ಲಿ, ಮುಂಬೈ ಹಾಗೂ ರಾಜಸ್ಥಾನ ತಂಡಗಳನ್ನು ಎದುರಿಸಲಿದೆ. ಲಕ್ನೊ ತಂಡವು ಉಳಿದಿರುವ ಪಂದ್ಯಗಳಲ್ಲಿ ಡೆಲ್ಲಿ, ಮುಂಬೈ, ಪಂಜಾಬ್, ಆರ್‌ಸಿಬಿ, ಗುಜರಾತ್ ಹಾಗೂ ಹೈದರಾಬಾದ್ ತಂಡಗಳನ್ನು ಎದುರಿಸಲಿದೆ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಇನ್ನುಳಿದ 6 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸುವ ಅಗತ್ಯವಿದೆ. ಮುಂಬೈ ತಂಡವು ಸದ್ಯ +0.483 ನೆಟ್ ರನ್‌ರೇಟ್‌ನೊಂದಿಗೆ 8 ಅಂಕ ಗಳಿಸಿದೆ. ಮುಂಬರುವ ಪಂದ್ಯಗಳಲ್ಲಿ ಹೈದರಾಬಾದ್, ಲಕ್ನೊ, ರಾಜಸ್ಥಾನ, ಗುಜರಾತ್, ಪಂಜಾಬ್ ಹಾಗೂ ಡೆಲ್ಲಿ ತಂಡಗಳನ್ನು ಎದುರಿಸಲಿದೆ.
ಕೆಕೆಆರ್: ಗುಜರಾತ್ ವಿರುದ್ಧ 39 ರನ್‌ನಿಂದ ಸೋತ ನಂತರ ಹಾಲಿ ಚಾಂಪಿಯನ್ ಕೆಕೆಆರ್ ಕಠಿಣ ಪರಿಸ್ಥಿತಿಯಲ್ಲಿದೆ. ಪ್ಲೇ ಆಫ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿರಬೇಕಾದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡವು ಇನ್ನುಳಿದ 6 ಪಂದ್ಯಗಳ ಪೈಕಿ 5ರಲ್ಲಿ ಗೆಲ್ಲುವ ಅವಶ್ಯಕತೆ ಇದೆ. ಕೆಕೆಆರ್ ತಂಡವು ಪಂಜಾಬ್, ಡೆಲ್ಲಿ, ರಾಜಸ್ಥಾನ, ಸಿಎಸ್‌ಕೆ, ಎಸ್‌ಆರ್‌ಎಚ್ ಹಾಗೂ ಆರ್‌ಸಿಬಿ ತಂಡಗಳನ್ನು ಎದುರಿಸಲು ಸಜ್ಜಾಗಿದೆ.
ರಾಜಸ್ಥಾನ, ಎಸ್‌ಆರ್‌ಎಚ್, ಸಿಎಸ್‌ಕೆ: ರಾಜಸ್ಥಾನ ಹಾಗೂ ಚೆನ್ನೈ ತಂಡಗಳು ಉಳಿದ 6 ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಹೈದರಾಬಾದ್ ತಂಡವು ಇನ್ನುಳಿದ 7 ಪಂದ್ಯಗಳ ಪೈಕಿ ಆರರಲ್ಲಿ ಗೆಲ್ಲುವ ಅವಶ್ಯಕತೆ ಇದೆ. ಕಳಪೆ ನೆಟ್ ರನ್ ರೇಟ್ ಈ ಎಲ್ಲ ತಂಡಗಳ ಪ್ಲೇ ಆಫ್ ಹಾದಿಗೆ ತೊಡಕಾಗಿದೆ. ರಾಜಸ್ಥಾನ ತಂಡವು ಆರ್‌ಸಿಬಿ, ಗುಜರಾತ್, ಮುಂಬೈ, ಕೆಕೆಆರ್, ಸಿಎಸ್‌ಕೆ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ತನ್ನ ಕೊನೆಯ 6 ಪಂದ್ಯಗಳಲ್ಲಿ ಎದುರಿಸಲಿದೆ. ಸಿಎಸ್‌ಕೆ ಮುಂಬರುವ ಪಂದ್ಯಗಳಲ್ಲಿ ಎಸ್‌ಆರ್‌ಎಚ್, ಪಂಜಾಬ್, ಆರ್‌ಸಿಬಿ, ಕೆಕೆಆರ್, ರಾಜಸ್ಥಾನ ಹಾಗೂ ಗುಜರಾತ್ ತಂಡಗಳನ್ನು ಮುಖಾಮುಖಿಯಾಗಲಿದೆ. ಹೈದರಾಬಾದ್ ತಂಡವು ಮುಂಬೈ, ಸಿಎಸ್‌ಕೆ, ಗುಜರಾತ್, ಡೆಲ್ಲಿ, ಕೆಕೆಆರ್, ಆರ್‌ಸಿಬಿ ಹಾಗೂ ಲಕ್ನೊ ತಂಡಗಳನ್ನು ಎದುರಿಸದೆ.