ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದ ಅತ್ಲೀಟ್ಸ್ ಆಯೋಗದ ಅಧ್ಯಕ್ಷರಾಗಿ ಮೀರಾಬಾಯಿ ಚಾನು ನೇಮಕ

ಮೀರಾಬಾಯಿ ಚಾನು | PC :@mirabai_chanu / X
ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಹಾಗೂ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಎಸ್.ಸತೀಶ್ ಕುಮಾರ್ ಅವರು ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದ ಅತ್ಲೀಟ್ಸ್ ಆಯೋಗದಲ್ಲಿ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಇಬ್ಬರ ಅಧಿಕಾರದ ಅವಧಿಯು 4 ವರ್ಷಗಳ ತನಕ ಇರುತ್ತದೆ.
ಭಾರತದ ಅತ್ಯಂತ ಯಶಸ್ವಿ ವೇಟ್‌ಲಿಫ್ಟರ್ ಆಗಿರುವ ಮೀರಾಬಾಯಿ ತನ್ನ ಹೆಸರಲ್ಲಿ ಹಲವಾರು ರಾಷ್ಟ್ರೀಯ ದಾಖಲೆಗಳು ಹಾಗೂ ಐತಿಹಾಸಿಕ ಮೈಲಿಗಲ್ಲುಗಳನ್ನು ಹೊಂದಿದ್ದಾರೆ. ಒಟ್ಟು 205 ಕೆಜಿ ಎತ್ತಿ ಹಿಡಿದು ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಲ್ಲದೆ, ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
88ಕೆಜಿ ಎತ್ತಿ ಹಿಡಿದು ಸ್ನ್ಯಾಚ್‌ನಲ್ಲೂ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ವೇಟ್‌ಲಿಫ್ಟರ್ ಎನಿಸಿಕೊಂಡಿದ್ದರು. 2017ರಲ್ಲಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ಸ್‌ನಲ್ಲಿ ಎರಡು ದಶಕಗಳ ನಂತರ ಚಿನ್ನದ ಪದಕ ಗೆದ್ದಿರುವ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿದ್ದರು. 22 ವರ್ಷಗಳ ಪದಕದ ಬರ ನೀಗಿಸಿದ್ದರು.
ಸತೀಶ್ ಅವರು ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಪುರುಷರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಸತೀಶ್ ಒಟ್ಟು 317 ಕೆಜಿ ಎತ್ತಿ ಹಿಡಿದರು. 2014ರ ಗ್ಲಾಸ್ಗೊ ಗೇಮ್ಸ್ ನಂತರ ಸತತ ಎರಡನೇ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಜಯಿಸಿದ ಸಾಧನೆ ಮಾಡಿದ್ದರು.