ಟೆಸ್ಟ್ ಕ್ರಿಕೆಟ್ ವೈಫಲ್ಯದ ನಂತರ ಚಾಂಪಿಯನ್ಸ್ ಟ್ರೋಫಿಯತ್ತ ಭಾರತ ಕ್ರಿಕೆಟ್ ತಂಡದ ಚಿತ್ತ
ಸಿಡ್ನಿ: ಭಾರತ ಕ್ರಿಕೆಟ್ ತಂಡವು ಹಿಂದಿನ 8 ಟೆಸ್ಟ್ ಪಂದ್ಯಗಳ ಪೈಕಿ ಏಳರಲ್ಲಿ ಸೋಲುಂಡಿದೆ. ಇದೀಗ ಅದು ಮುಂಬರುವ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿ ಹಾಗೂ ಆ ನಂತರ ನಡೆಯುವ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯತ್ತ ಚಿತ್ತಹರಿಸಿದೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಶೀಘ್ರವೇ ಆಸ್ಟ್ರೇಲಿಯದಿಂದ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಹಿರಿಯರ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ, ಚಾಂಪಿಯನ್ಸ್ ಟ್ರೋಫಿಗೆ ತಂಡಗಳನ್ನು ಪ್ರಕಟಿಸಲಿದೆ.
ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಟೆಸ್ಟ್ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿದ್ದಾರೆ. ಅಗರ್ಕರ್ ಹಾಗೂ ಕೋಚ್ ಗೌತಮ್ ಗಂಭೀರ್ ಸೀಮಿತ ಓವರ್ ಕ್ರಿಕೆಟ್ ಸರಣಿಯ ಕುರಿತು ಚರ್ಚೆ ಆರಂಭಿಸಿದ್ದಾರೆ.
ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಐಸಿಸಿ ಆಯೋಜಿತ ಚಾಂಪಿಯನ್ಸ್ ಟ್ರೋಫಿಗೆ ಎಲ್ಲ ತಂಡಗಳು ಜನವರಿ 12ಕ್ಕೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಪ್ರಕಟಿಸಬೇಕು. ಫೆಬ್ರವರಿ 13ರ ತನಕ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.
ಎಲ್ಲ ತಂಡಗಳು ತಮ್ಮ ತಂಡಗಳ ಪಟ್ಟಿಯನ್ನು ಜನವರಿ 12ಕ್ಕೆ ಸಲ್ಲಿಸಬೇಕು. ಆದರೆ, ಫೆಬ್ರವರಿ 13ರ ತನಕ ಬದಲಾವಣೆಗಳಿಗೆ ಅವಕಾಶವಿದೆ. ತಂಡವನ್ನು ಪ್ರಕಟಿಸುವುದು, ಪ್ರಕಟಿಸದೆ ಇರುವುದು ಆಯಾ ತಂಡಗಳಿಗೆ ಬಿಟ್ಟ ವಿಚಾರ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸಲ್ಲಿಸಲ್ಪಟ್ಟ ತಂಡಗಳ ಪಟ್ಟಿಯನ್ನು ಫೆಬ್ರವರಿ 13ರಂದು ಬಿಡುಗಡೆ ಮಾಡಲಿದೆ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಸ್ಪ್ರಿತ್ ಬುಮ್ರಾರನ್ನು ಹೊರತುಪಡಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ಬಹುತೇಕ ಆಟಗಾರರು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಭಾರತ ತಂಡವು ಕಳೆದ ವರ್ಷ ಆಗಸ್ಟ್ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಕೊನೆಯ ಬಾರಿ 50 ಓವರ್ ಗಳ ಸರಣಿಯನ್ನು ಆಡಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನೊಳಗೊಂಡ ಆಡುವ 11ರ ಬಳಗದೊಂದಿಗೆ ಮೂರು ಏಕದಿನ ಪಂದ್ಯಗಳನ್ನು ಆಡಿದೆ.
ಯುಎಇನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಅವರು ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದ್ದು, ಪ್ರಮುಖ ಫಿಟ್ನೆಸ್ ಸಮಸ್ಯೆ ಇರದಿದ್ದರೆ ಬುಮ್ರಾ ಉಪ ನಾಯಕನಾಗಿರುತ್ತಾರೆ. ವೈಟ್ ಬಾಲ್ ಸ್ಪೆಷಲಿಸ್ಟ್ಗಳಾದ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಹಾಗೂ ಅರ್ಷದೀಪ್ ಸಿಂಗ್ ತಂಡಕ್ಕೆ ವಾಪಸಾಗಲಿದ್ದಾರೆ.
ಶ್ರೇಯಸ್ ಹಾಗೂ ಹಾರ್ದಿಕ್ ತಮ್ಮ ರಾಜ್ಯಗಳ ಪರ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಈ ಇಬ್ಬರು ಉತ್ತಮ ಟಚ್ನಲ್ಲಿದ್ದಾರೆ. ಹಾರ್ದಿಕ್ ಅವರು ಟಿ20 ಕ್ರಿಕೆಟ್ ಹಾಗೂ ವಿಜಯ್ ಹಝಾರೆ ಟ್ರೋಫಿಯಲ್ಲಿ ಬರೋಡಾ ತಂಡದ ಪರ ಲಿಸ್ಟ್ ಎ ಪಂದ್ಯಗಳಲ್ಲಿ ಬ್ಯಾಟಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.