ಶ್ರೀಲಂಕಾ ಕ್ರಿಕೆಟ್ ಪ್ರವಾಸದಿಂದ ಹೇಝಲ್‌ವುಡ್ ಹೊರಕ್ಕೆ: ವರದಿ
ಹೊಸದಿಲ್ಲಿ: ಶ್ರೀಲಂಕಾ ವಿರುದ್ಧ ಜನವರಿ 29ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ಆಸ್ಟ್ರೇಲಿಯ ಕ್ರಿಕೆಟ್ ತಂಡ ತೀವ್ರ ಹಿನ್ನಡೆ ಕಂಡಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಲಂಕಾ ಕ್ರಿಕೆಟ್ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಹೇಝಲ್‌ವುಡ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಎರಡು ಪಂದ್ಯಗಳಿಂದ ವಂಚಿತರಾಗಿದ್ದರು.
ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ ಹೇಝಲ್‌ವುಡ್ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ. ತಂಡವನ್ನು ಅಂತಿಮಗೊಳಿಸಲು ಆಯ್ಕೆಗಾರರು ಬುಧವಾರ ಸಭೆ ಸೇರಲಿದ್ದಾರೆ. ಸುಮಾರು 16 ಆಟಗಾರರನ್ನು ಆಯ್ಕೆ ಮಾಡಬಹುದು. ಗುರುವಾರದಂದು ತಂಡ ಪ್ರಕಟವಾಗಬಹುದು.
ಪಾಕಿಸ್ತಾನ ಹಾಗೂ ಯುಎಇನಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಏಕದಿನ ಕ್ರಿಕೆಟ್ ತಂಡವನ್ನು ಆಸ್ಟ್ರೇಲಿಯದ ಆಯ್ಕೆಗಾರರು ಪ್ರಕಟಿಸುವ ಸಾಧ್ಯತೆಯಿದೆ.
ಹೇಝಲ್‌ವುಡ್ ಅನುಪಸ್ಥಿತಿ ಹಾಗೂ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯತೆಯಿಂದಾಗಿ ಆಸ್ಟ್ರೇಲಿಯದ ವೇಗದ ಬೌಲಿಂಗ್ ವಿಭಾಗ ಕಳೆಗುಂದಿದೆ. ಮುಂಬರುವ ಆ್ಯಶಸ್ ಸರಣಿ ಹಾಗೂ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುತ್ತಿರುವ ಕಾರಣ ಆಯ್ಕೆ ಸಮಿತಿಯು ಹೇಝಲ್‌ವುಡ್ ಫಿಟ್ನೆಸ್‌ಗೆ ಮೊದಲ ಆದ್ಯತೆ ನೀಡುತ್ತಿದೆ.
ಶ್ರೀಲಂಕಾದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಮೂರು ವರ್ಷಗಳ ಹಿಂದೆ ಗಾಲೆಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನಾಥನ್ ಲಿಯೊನ್ ಮೇಲೆ ಸಾಕಷ್ಟು ಒತ್ತಡ ಬಿದ್ದಿತ್ತು. ಅವರು ಆಸೀಸ್ ಪರ 64 ಓವರ್ ಬೌಲಿಂಗ್ ಮಾಡಿದ್ದರು.
ಲಿಯೊನ್ ಗೆ ನೆರವಾಗಲು ಆಯ್ಕೆ ಸಮಿತಿಯು ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುನೆಮನ್ ಹಾಗೂ ಆಫ್ ಸ್ಪಿನ್ನರ್ ಟಾಡ್ ಮುರ್ಫಿ ಅವರನ್ನು ಅಯ್ಕೆ ಮಾಡಬಹುದು.