ದೇಶೀಯ ಕ್ರಿಕೆಟ್ ಗೆ ಮರಳಿ, ಒಂದಿಷ್ಟು ಆಟವಾಡಿ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ರವಿ ಶಾಸ್ತ್ರಿ ಕಿವಿಮಾತು
ಹೊಸದಿಲ್ಲಿ: ನಿಮ್ಮ ಟೆಸ್ಟ್ ವೃತ್ತಿ ಜೀವನವನ್ನು ಪುನರುಜ್ಜೀವನಗೊಳಿಸಿಕೊಳ್ಳಲು ದೇಶೀಯ ಕ್ರಿಕೆಟ್ ಗೆ ಮರಳಿ ಒಂದಿಷ್ಟು ಆಟವಾಡಿ ಎಂದು ಫಾರ್ಮ್ ಕಳೆದುಕೊಂಡಿರುವ ಭಾರತದ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಕಿವಿಮಾತು ಹೇಳಿದ್ದಾರೆ.
ಐಸಿಸಿ ಪರಾಮರ್ಶೆ ಸಭೆಯನ್ನುದ್ದೇಶಿಸಿ ಮಾತನಾಡಿದ ರವಿ ಶಾಸ್ತ್ರಿ, ದೇಶೀಯ ಕ್ರಿಕೆಟ್ ನಲ್ಲಿನ ಕೆಂಪು ಬಾಲ್ ನಲ್ಲಿನ ಆಟವು ಕೇವಲ ಅವರ ಕೌಶಲವನ್ನು ಮಾತ್ರ ವೃದ್ಧಿಸುವುದಿಲ್ಲ ಬದಲಿಗೆ ಯುವ ತಲೆಮಾರಿನ ಕ್ರಿಕೆಟಿಗರನ್ನು ಬೆಳೆಸಲು ಸಹಕಾರಿಯೂ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.
“ಅವರಲ್ಲೇನಾದರೂ ಕೊರತೆ ಇದ್ದರೆ, ಅವರು ಒಂದಿಷ್ಟು ದೇಶೀಯ ಕ್ರಿಕೆಟ್ ಆಡಬೇಕು ಎಂಬುದು ನನ್ನ ಭಾವನೆಯಾಗಿದೆ” ಎಂದು ಹೇಳಿದ ರವಿ ಶಾಸ್ತ್ರಿ, “ನೀವು ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟು ದೀರ್ಘಕಾಲ ಆಡಬೇಕೆಂದರೆ, ನೀವು ದೇಶೀಯ ಕ್ರಿಕೆಟ್ ನ ಎರಡು ಋತುಗಳಲ್ಲಾದರೂ ಆಡುವುದು ಮುಖ್ಯವಾಗಿದೆ. ನೀವು ಹೊಸ ತಲೆಮಾರಿನ ಸಂಪರ್ಕಕ್ಕೆ ಬರುತ್ತೀರಿ ಹಾಗೂ ನಿಮ್ಮ ಅನುಭವದಿಂದ ಯುವ ತಲೆಮಾರಿಗೆ ಕೊಡುಗೆ ನೀಡಬಹುದು” ಎಂದು ಸಲಹೆ ನೀಡಿದರು.
ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ಮುಕ್ತಾಯಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಒಂದು ದಶಕದ ನಂತರ ಬಾರ್ಡರ್ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದ್ದು, ಈ ಸರಣಿಯಲ್ಲಿನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಕಳಪೆ ಫಾರ್ಮ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.