ನಿಧಾನಗತಿಯ ಬೌಲಿಂಗ್: ಪಾಕ್ ಆಟಗಾರರಿಗೆ 25 ಶೇ. ದಂಡ; 5 ಡಬ್ಲ್ಯುಟಿಸಿ ಅಂಕ ಕಡಿತ

Update: 2025-01-07 16:27 GMT

Photo: ICC

ದುಬೈ: ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ನಿಧಾನ ಗತಿಯ ಬೌಲಿಂಗ್‌ಗಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪಾಕಿಸ್ತಾನದ ಆಟಗಾರರಿಗೆ ಅವರ ಪಂದ್ಯಶುಲ್ಕದ 25 ಶೇಕಡ ದಂಡ ವಿಧಿಸಿದೆ. ಜೊತೆಗೆ, ಪಾಕಿಸ್ತಾನದ ಐದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಗಳನ್ನು ಕಡಿತಗೊಳಿಸಿದೆ.

ಪಾಕಿಸ್ತಾನ ವಿರುದ್ಧದ ಸರಣಿಯ ಎರಡನೇ ಹಾಗೂ ಕೊನೆಯ ಟೆಸ್ಟನ್ನು ದಕ್ಷಿಣ ಆಫ್ರಿಕಾವು ನಾಲ್ಕು ದಿನಗಳ ಒಳಗೆ 10 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಅದು ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ. ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

‘‘ನಷ್ಟವಾದ ಸಮಯವನ್ನು ಗಣನೆಗೆ ತೆಗೆದುಕೊಂಡ ಬಳಿಕ ಪಾಕಿಸ್ತಾನವು ನಿಗದಿತ ಸಮಯದಲ್ಲಿ 5 ಓವರ್‌ಗಳನ್ನು ಕಡಿಮೆ ಎಸೆದಿದೆ ಎಂಬ ನಿರ್ಧಾರಕ್ಕೆ ಪಂದ್ಯದ ರೆಫರಿ ವೆಸ್ಟ್ ಇಂಡೀಸ್‌ನ ರಿಚೀ ರಿಚರ್ಡ್ಸನ್ ಬಂದಿದ್ದಾರೆ. ಹಾಗಾಗಿ ಪಾಕಿಸ್ತಾನದ ವಿರುದ್ಧ ದಂಡ ವಿಧಿಸಲಾಗಿದೆ’’ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಐಸಿಸಿ ನೀತಿ ಸಂಹಿತೆ ಪ್ರಕಾರ, ನಿಗದಿತ ಸಮಯದಲ್ಲಿ ಎಸೆಯಲು ಅಸಾಧ್ಯವಾದ ಪ್ರತಿಯೊಂದು ಓವರ್‌ಗೆ ಪಂದ್ಯಶುಲ್ಕದ ಐದು ಶೇಕಡದಂತೆ ದಂಡವನ್ನು ಆಟಗಾರರಿಗೆ ವಿಧಿಸಲಾಗುತ್ತದೆ. ಜೊತೆಗೆ, ಕೊರತೆಯಾದ ಪ್ರತಿ ಓವರ್‌ಗೆ ಒಂದರಂತೆ ತಂಡದ ಡಬ್ಲ್ಯುಟಿಸಿ ಅಂಕಗಳನ್ನೂ ಕಡಿತಗೊಳಿಸಲಾಗುವುದು.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾನ್ ಮಸೂದ್ ಪ್ರಸ್ತಾಪಿತ ದಂಡವನ್ನು ಸ್ವೀಕರಿಸಿದ್ದಾರೆ, ಹಾಗಾಗಿ, ಔಪಚಾರಿಕ ವಿಚಾರಣೆಯ ಅಗತ್ಯ ಉಂಟಾಗಿಲ್ಲ ಎಂಬುದಾಗಿಯೂ ಐಸಿಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News