ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿ
ಹೊಸದಿಲ್ಲಿ : ಸ್ಟಾರ್ ಶಟ್ಲರ್‌ಗಳಾದ ಲಕ್ಷ್ಯ ಸೇನ್ ಹಾಗೂ ಪಿ.ವಿ. ಸಿಂಧು ಅವರು ಜನವರಿ 14ರಿಂದ ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾಗಲಿರುವ ಯೋನೆಕ್ಸ್-ಸನ್‌ರೈಸ್ ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅತಿ ದೊಡ್ಡ ತಂಡವನ್ನು ಮುನ್ನಡೆಸಲಿದ್ದಾರೆ.
ಟಾಪ್ ಸ್ಟಾರ್‌ಗಳಾದ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸನ್, ಆನ್ ಸೆ ಯಂಗ್ ಹಾಗೂ ವಿಶ್ವದ ನಂ.1 ಆಟಗಾರ ಶಿ ಯೂಕಿ ಅವರು ಸ್ಪರ್ಧಾಕಣದಲ್ಲಿದ್ದಾರೆ. ಪಂದ್ಯಾವಳಿಯು ಇಂದಿರಾ ಗಾಂಧಿ ಸ್ಟೇಡಿಯಮ್‌ನ ಕೆ.ಡಿ.ಜಾಧವ್ ಒಳಾಂಗಣ ಹಾಲ್‌ನಲ್ಲಿ ನಡೆಯುವ ನಿರೀಕ್ಷೆ ಇದೆ.
950,000 ಯುಎಸ್ ಡಾಲರ್ ಬಹುಮಾನ ಮೊತ್ತದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸ್ಪರ್ಧೆಯಲ್ಲಿ ಮೂವರು ಪುರುಷರ ಸಿಂಗಲ್ಸ್, ನಾಲ್ವರು ಮಹಿಳೆಯರ ಸಿಂಗಲ್ಸ್, ಇಬ್ಬರು ಪುರುಷರ ಡಬಲ್ಸ್, 8 ಮಹಿಳೆಯರ ಡಬಲ್ಸ್ ಹಾಗೂ ನಾಲ್ವರು ಮಿಕ್ಸೆಡ್ ಡಬಲ್ಸ್ ಜೋಡಿ ಸಹಿತ ಒಟ್ಟು 21 ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ.
ಸೂಪರ್-750 ಟೂರ್ನಿಯಲ್ಲಿ ಹಲವಾರು ಭಾರತೀಯ ಆಟಗಾರರು ಸ್ಪರ್ಧಿಸುತ್ತಿದ್ದಾರೆ. ಇದು ವಿಶ್ವ ಮಟ್ಟದಲ್ಲಿ ಭಾರತೀಯ ಬ್ಯಾಡ್ಮಿಂಟನ್‌ನ ಬೆಳವಣಿಗೆ ಹಾಗೂ ಏರಿಕೆಯ ಗಮನಾರ್ಹ ಸಂಕೇತವಾಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಪ್ರಕಟನೆಯಲ್ಲಿ ತಿಳಿಸಿದೆ.
ಇದು ಕೇವಲ ಆರಂಭ. 2025ರಲ್ಲಿ ಖ್ಯಾತ ಆಟಗಾರರ ಜೊತೆಗೆ ಇನ್ನಷ್ಟು ಆಟಗಾರರು ಭರವಸೆ ಮೂಡಿಸುವ ವಿಶ್ವಾಸವಿದೆ. ಈ ವರ್ಷ ಹೊಸ ಮುಖಗಳು ಮಿಂಚಲಿದ್ದು, ಭಾರತಕ್ಕೆ ವೈಭವ ಹಾಗೂ ಹೆಮ್ಮೆಯನ್ನು ತರಲಿದ್ದಾರೆ. ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆಯು ಭಾರತೀಯ ಪ್ರತಿಭೆಗಳ ಹೆಚ್ಚುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಸಂಜಯ್ ಮಿಶ್ರಾ ಹೇಳಿದ್ದಾರೆ.
2023ರಲ್ಲಿ ಸೂಪರ್-750 ವಿಭಾಗಕ್ಕೆ ಭಡ್ತಿ ಪಡೆದಿರುವ ಪಂದ್ಯಾವಳಿಯಲ್ಲಿ ಭಾರತವು ಹಿಂದಿನ ಎರಡು ಆವೃತ್ತಿಗಳಲ್ಲಿ 14 ಆಟಗಾರರನ್ನು ಕಣಕ್ಕಿಳಿಸಿತ್ತು. 2024ರಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದರೆ, ಎಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.
2024ರ ಚೀನಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಚಿರಾಗ್ ಹಾಗೂ ಸಾತ್ವಿಕ್ ಅವರು ಭಾರತದ ಪುರುಷರ ಡಬಲ್ಸ್ ಸವಾಲನ್ನು ಮುನ್ನಡೆಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ಸೀಮಿತ ಪಂದ್ಯಗಳಲ್ಲಿ ಆಡಿರುವ ಸಾತ್ವಿಕ್ ಗಾಯದಿಂದ ಚೇತರಿಸಿಕೊಂಡಿದ್ದು, ತನ್ನ ಫಾರ್ಮ್ ಕಂಡುಕೊಳ್ಳುವತ್ತ ಗಮನ ಹರಿಸಿದ್ದಾರೆ.
ಸಾತ್ವಿಕ್-ಚಿರಾಗ್ ರಲ್ಲದೆ, ಮಾಜಿ ಚಾಂಪಿಯನ್ ಲಕ್ಷ್ಯ ಹಾಗೂ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಮೇಲೆ ಭಾರತ ವಿಶ್ವಾಸ ಇಟ್ಟುಕೊಂಡಿದೆ.
ಸ್ಪರ್ಧಾವಳಿಯಲ್ಲಿ ವಿಶ್ವ ಟಾಪ್-20ಯಲ್ಲಿರುವ 18 ಪುರುಷ ಸಿಂಗಲ್ಸ್ ಆಟಗಾರರು, ಟಾಪ್-20ರಲ್ಲಿರುವ 14 ಮಹಿಳಾ ಸಿಂಗಲ್ಸ್ ಶಟ್ಲರ್‌ಗಳು ಭಾಗವಹಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಚೀನಾದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತ ಜೋಡಿ ಲಿಯಾಂಗ್ ವೀಕೆಂಗ್ ಹಾಗೂ ವಾಂಗ್ ಚಾಂಗ್ ಜೊತೆಗೆ ಮಲೇಶ್ಯದ ಪ್ಯಾರಿಸ್ ಗೇಮ್ಸ್‌ನ ಕಂಚಿನ ಪದಕ ವಿಜೇತ ಜೋಡಿ ಆರೊನ್ ಚಿಯಾ ಹಾಗೂ ಸೊ ವೂ ಯಿಕ್ ಅವರಿದ್ದಾರೆ.
*ಭಾರತ ಆಟಗಾರರ ಪಟ್ಟಿ
ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್, ಪ್ರಿಯಾಂಶು ರಾಜಾವತ್.
ಮಹಿಳೆಯರ ಸಿಂಗಲ್ಸ್: ಪಿ.ವಿ. ಸಿಂಧು, ಮಾಳವಿಕಾ ಬನ್ಸೋಡ್, ಅನುಪಮಾ ಉಪಾಧ್ಯಾಯ, ಆಕರ್ಷಿ ಕಶ್ಯಪ್.
ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ/ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಕೆ.ಸಾಯಿ ಪ್ರತೀಕ್/ಪೃಥ್ವಿ ರಾಯ್.
ಮಹಿಳೆಯರ ಡಬಲ್ಸ್: ಟ್ರೀಸಾ ಜೋಲಿ/ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ/ತನಿಶಾ ಕ್ರಾಸ್ಟೊ, ರುತುಪರ್ಣ ಪಾಂಡಾ/ಶ್ವೇತಪರ್ಣ ಪಾಂಡಾ, ಮಾನಸಾ ರಾವತ್/ಗಾಯತ್ರಿ ರಾವತ್, ಅಶ್ವಿನಿ ಭಟ್/ಶಿಖಾ ಗೌತಮ್, ಸಾಕ್ಷಿ ಗಹ್ಲಾವತ್/ಅಪೂರ್ವಾ ಗಹ್ಲಾವತ್, ಸಾನಿಯಾ ಸಿಕಂದರ್/ರಶ್ಮಿ ಗಣೇಶ್, ಮೃನ್ಮಯೀ ದೇಶಪಾಂಡೆ/ಪ್ರೇರಣಾ ಅಳ್ವ್ವೇಕರ್.
ಮಿಕ್ಸೆಡ್ ಡಬಲ್ಸ್: ಧ್ರುವ ಕಪಿಲಾ/ತನಿಶಾ ಕ್ರಾಸ್ಟೊ, ಕೆ.ಸತೀಶ್ ಕುಮಾರ್/ಆದ್ಯಾ ವರಿಯತ್, ರೋಹನ್ ಕಪೂರ್/ಜಿ. ಋತ್ವಿಕಾ ಶಿವಾನಿ, ಆಶಿತ್ ಸೂರ್ಯ/ಅಮೃತಾ ಪ್ರಮುತೇಶ್.