ಚಾಂಪಿಯನ್ಸ್ ಟ್ರೋಫಿ ಕೊಹ್ಲಿ, ರೋಹಿತ್ ಗೆ ವಿದಾಯ ಟೂರ್ನಿ?

Update: 2025-01-08 04:01 GMT

PC: x.com/htTweets

ಮುಂಬೈ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆಗಾರರು ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡುವ ಭಾರತೀಯ ತಂಡವನ್ನು ಪ್ರಕಟಿಸುವ ಸಿದ್ಧತೆಯಲ್ಲಿದ್ದು, ಈ ಟೂರ್ನಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ವಿದಾಯ ಟೂರ್ನಿಯಾಗುವ ಸಾಧ್ಯತೆ ಇದೆ.

ಹಲವು ಐಸಿಸಿ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರುವ ರೋಹಿತ್ ಹಾಗೂ ಕೊಹ್ಲಿ ಬಗ್ಗೆ ಗಮನ ಹರಿಸಲಾಗಿದೆ. ಭಾರತೀಯ ಕ್ರಿಕೆಟ್ ತಂಡ ಬಾರ್ಡರ್- ಗಾವಸ್ಕರ್ ಟ್ರೋಫಿಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ, ಫೆಬ್ರುವರಿ 19 ರಿಂದ ಮಾರ್ಚ್ 9ರ ವರೆಗೆ ನಡೆಯುವ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಎಲ್ಲರ ಕುತೂಹಲ ಇದೆ. ಇದಕ್ಕೂ ಮುನ್ನ ಫೆಬ್ರುವರಿ 6ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಟಿ20 ಸರಣಿ ಕೂಡಾ ಕುತೂಹಲ ಕೆರಳಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ಹಲವು ಮಂದಿ ಅಂದಾಜಿಸಿದ್ದಾರೆ. ಆದರೆ ಅವರು ಫಾರ್ಮ್ ಗೆ ಮರಳಬೇಕಾದ್ದು ಅಗತ್ಯ. ಏಕದಿನ ಪಂದ್ಯಗಳಲ್ಲಿ ರೋಹಿತ್ ಮುಂದುವರಿಯಬೇಕಾದರೆ, ಅವರು ರನ್ ದಾಹವನ್ನು ತಮ್ಮ ಬ್ಯಾಟಿಂಗ್ ಮೂಲಕ ಪ್ರದರ್ಶಿಸಬೇಕು ಎಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 36 ಹಾಗೂ 37 ವರ್ಷದವರಾಗಿದ್ದು, ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆ ಅರ್ಹತೆ ಪಡೆದಿದ್ದಲ್ಲಿ ಇಬ್ಬರಿಗೂ ಅದು ಕೊನೆಯ ಐಸಿಸಿ ಟೂರ್ನಿಯಾಗಿರುತ್ತಿತ್ತು. 2025ರ ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿದರೆ 2026ರ ಟಿ20 ವಿಶ್ವಕಪ್ ಮುಂದಿನ ದೊಡ್ಡ ಐಸಿಸಿ ಟೂರ್ನಿಯಾಗಿದೆ. ಇಬ್ಬರೂ ಚುಟುಕು ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ವೇಳೆಗೆ ಉಭಯ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News