ಮಾಜಿ ಫುಟ್ಬಾಲ್ ಆಟಗಾರ ಡ್ಯಾನಿ ಆಲ್ವಿಸ್‌ರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ ನ್ಯಾಯಾಲಯ

ಡ್ಯಾನಿ ಆಲ್ವಿಸ್ | NDTV
ಬಾರ್ಸಿಲೋನ: ಸ್ಪೇನ್ನ ನ್ಯಾಯಾಲಯವೊಂದು ಶುಕ್ರವಾರ ಬಾರ್ಸಿಲೋನ ತಂಡದ ಮಾಜಿ ಫುಟ್ಬಾಲ್ ಆಟಗಾರ ಬ್ರೆಝಿಲ್ನ ಡ್ಯಾನಿ ಆಲ್ವಿಸ್‌ರನ್ನು ಲೈಂಗಿಕ ದೌರ್ಜನ್ಯ ಆರೋಪದಿಂದ ಮುಕ್ತಗೊಳಿಸಿದೆ. ಅವರ ಆರೋಪವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2022ರ ಡಿಸೆಂಬರ್ನಲ್ಲಿ ನೈಟ್ ಕ್ಲಬ್ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದ ಆರೋಪದಲ್ಲಿ 2024 ಫೆಬ್ರವರಿಯಲ್ಲಿ ನ್ಯಾಯಾಲಯವೊಂದು 41 ವರ್ಷದ ಆಲ್ವಿಸ್ಗೆ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈಗ ಆ ತೀರ್ಪನ್ನು ಬಾರ್ಸಿಲೋನದ ನಾಲ್ವರು ನ್ಯಾಯಾಧೀಶರನ್ನು ಒಳಗೊಂಡ ಮೇಲ್ಮನವಿ ನ್ಯಾಯಾಲಯವೊಂದು ರದ್ದುಪಡಿಸಿದೆ.
ಸಂತ್ರಸ್ತ ಮಹಿಳೆಯ ಹೇಳಿಕೆಗಳು ಮತ್ತು ಸಿಸಿಟಿವಿ ಚಿತ್ರಗಳ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ಮೇಲ್ಮನವಿ ನ್ಯಾಯಾಲಯ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಅದು ಫುಟ್ಬಾಲ್ ಆಟಗಾರನನ್ನು ದೋಷಿ ಎಂದು ಘೋಷಿಸುವ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು.
ಆಲ್ವಿಸ್ 2023ರ ಜನವರಿಯಿಂದ ಜೈಲಿನಲ್ಲಿದ್ದರು. ಅವರು ಸುಮಾರು 9.26 ಕೋಟಿ ರೂಪಾಯಿ ಪಾವತಿಸಿದ ಬಳಿಕ, 2024 ಮಾರ್ಚ್ನಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.
ಈ ತೀರ್ಪನ್ನು ಮ್ಯಾಡ್ರಿಡ್‌ನಲ್ಲಿರುವ ಸ್ಪೇನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.