ಹೃದಯಾಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಆಸ್ಪತ್ರೆಯಿಂದ ಬಿಡುಗಡೆ

ತಮೀಮ್ ಇಕ್ಬಾಲ್ | PC : NDTV
ಢಾಕಾ: ಇತ್ತೀಚೆಗೆ ದೇಶಿ ಕ್ರಿಕೆಟ್ ಪಂದ್ಯವೊಂದರ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಶುಕ್ರವಾರ ಢಾಕಾದ ಆಸ್ಪತ್ರೆಯೊಂದರಿಂದ ಬಿಡುಗಡೆಯಾಗಿದ್ದಾರೆ.
ಸೋಮವಾರ ನಡೆದ ಢಾಕಾ ಪ್ರೀಮಿಯರ್ ಡಿವಿಶನ್ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ಮುಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ತಂಡವನ್ನು ಮುನ್ನಡೆಸುತ್ತಿದ್ದಾಗ ಎದೆ ನೋವು ಅನುಭವಿಸಿ ತಮೀಮ್(36) ನೆಲಕ್ಕೆ ಕುಸಿದು ಬಿದ್ದಿದ್ದರು.
ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರ ಹೃದಯಕ್ಕೆ ಸ್ಟೆಂಟ್ ಅಳವಡಿಸಲಾಗಿತ್ತು. ಬಳಿಕ ಅವರನ್ನು ಇನ್ನೊಂದು ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
‘‘ಅವರ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಹಾಬುದ್ದೀನ್ ತಾಲೂಕ್ದರ್ ಹೇಳಿದರು.
ತಮೀಮ್ ಎಲ್ಲಾ ಮಾದರಿಗಳ ಕ್ರಿಕೆಟ್ನಲ್ಲಿ ಒಟ್ಟು 15,000ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರನ್ಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್, ಏಕದಿನ ಮತ್ತು ಟಿ20 ಈ ಮೂರೂ ವಿಭಾಗಗಳಲ್ಲಿ ಶತಕಗಳನ್ನು ಬಾರಿಸಿದ ಏಕೈಕ ಬಾಂಗ್ಲಾದೇಶಿ ಕ್ರಿಕೆಟಿಗನಾಗಿದ್ದಾರೆ.
ತಮೀಮ್ ಕನಿಷ್ಠ ಮೂರು ತಿಂಗಳುಗಳ ಕಾಲ ಕ್ರಿಕೆಟ್ನಿಂದ ಹೊರಗುಳಿಯುತ್ತಾರೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ