ಮೊದಲ ಬಾರಿ ಫೈನಲ್ ತಲುಪಿದ ಸಬಲೆಂಕಾ

ಅರ್ಯನಾ ಸಬಲೆಂಕಾ | PC: NDTV
ಮಯಾಮಿ: ವಿಶ್ವದ ನಂ.1 ಆಟಗಾರ್ತಿ ಅರ್ಯನಾ ಸಬಲೆಂಕಾ ಇಟಲಿಯ ಜಾಸ್ಮಿನ್ ಪಯೋಲಿನಿ ಅವರನ್ನು ನೇರ ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಮಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ 71 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಸಬಲೆಂಕಾ ಅವರು 6ನೇ ಶ್ರೇಯಾಂಕದ ಪಯೋಲಿನಿ ಅವರನ್ನು 6-2, 6-2 ಸೆಟ್ಗಳಿಂದ ಮಣಿಸಿದರು.
ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದಿರುವ ಬೆಲಾರುಸ್ ಆಟಗಾರ್ತಿ ಸಬಲೆಂಕಾ ಅವರು ತನ್ನ 5 ಪಂದ್ಯಗಳಲ್ಲಿ ಒಂದೂ ಸೆಟ್ ಕೈಚೆಲ್ಲಿಲ್ಲ.
‘‘ಇಂದು ನಾನು ಆಡಿರುವ ರೀತಿಗೆ ತುಂಬಾ ಸಂತೋಷವಾಗಿದೆ. ಮೊದಲ ಬಾರಿ ಮಯಾಮಿ ಓಪನ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿರುವುದಕ್ಕೂ ಕೂಡ ತುಂಬಾ ಖುಷಿಯಾಗಿದೆ’’ಎಂದು ಸಬಲೆಂಕಾ ಹೇಳಿದ್ದಾರೆ.
ಸಬಲೆಂಕಾ ಸೆಮಿ ಫೈನಲ್ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಸವಾಲನ್ನು ಎದುರಿಸಲಿದ್ದಾರೆ.
ಜೆಸ್ಸಿಕಾ ಫಿಲಿಪ್ಪೀನ್ಸ್ನ ವೈಲ್ಡ್ಕಾರ್ಡ್ ಆಟಗಾರ್ತಿ ಅಲೆಕ್ಸಾಂಡ್ರಾ ಎಲಾ ಅವರನ್ನು 2 ಗಂಟೆ, 24 ನಿಮಿಷಗಳಲ್ಲಿ ಕೊನೆಗೊಂಡಿರುವ ಕ್ವಾರ್ಟರ್ ಫೈನಲ್ನಲ್ಲಿ 7-6(7/3), 5-7, 6-3 ಸೆಟ್ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.2ನೇ ಆಟಗಾರ್ತಿ ಸ್ವಿಯಾಟೆಕ್ರನ್ನು ಸೋಲಿಸಿ ಶಾಕ್ ನೀಡಿದ್ದ 19ರ ಹರೆಯದ ಎಲಾ ಮಯಾಮಿಗೆ ಆಗಮಿಸುವ ಮೊದಲು ಡಬ್ಲ್ಯುಟಿಎನಲ್ಲಿ ಕೇವಲ ಎರಡು ಗೆಲುವು ದಾಖಲಿಸಿದ್ದರು. ಪ್ರಸಕ್ತ ಟೂರ್ನಿಯಲ್ಲಿ ಸ್ವಿಯಾಟೆಕ್ರಲ್ಲದೆ ಗ್ರ್ಯಾನ್ಸ್ಲಾಮ್ ವಿಜೇತರಾದ ಜೆಲೆನಾ ಒಸ್ಟಾಪೆಂಕೊ ಹಾಗೂ ಮ್ಯಾಡಿಸನ್ ಕೀಸ್ರನ್ನೂ ಸೋಲಿಸಿದ್ದ ಅಲೆಕ್ಸಾಂಡ್ರಾ ಎಲಾ ಎಲ್ಲರ ಗಮನ ಸೆಳೆದಿದ್ದರು.