‘ಈ ಬಾರಿ ಕಪ್ ನಮ್ದೇ’ಯಾ? ಎಬಿ ಡಿ ವಿಲಿಯರ್ಸ್ ಏನು ಹೇಳುತ್ತಾರೆ?

PC - sportstar
ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭವನ್ನು ಮಾಡಿದೆ. ಈ ತಂಡದಲ್ಲಿ ಆಡಿ ಈಗ ನಿವೃತ್ತರಾಗಿರುವ ದಕ್ಷಿಣ ಆಫ್ರಿಕದ ಕ್ರಿಕೆಟ್ ಮಾಂತ್ರಿಕ ಎಬಿ ಡಿ ವಿಲಿಯರ್ಸ್ ಈ ಬಗ್ಗೆ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ತಂಡದ ಸಮತೋಲನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಹತ್ತು ಪಟ್ಟು ಉತ್ತಮವಾಗಿದೆ ಎಂದು ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ತಂಡದ ಉತ್ತಮ ಆರಂಭವು ಮುಂದಕ್ಕೆ ಅದರ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆರ್ ಸಿ ಬಿ ಶುಕ್ರವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್ ಗಳ ಬೃಹತ್ ಅಂತರದಿಂದ ಮಣಿಸಿದೆ. ಇದು ಆರ್ ಸಿ ಬಿ ಯ ಸತತ ಎರಡನೇ ಗೆಲುವಾಗಿದೆ. ಅದೂ ಅಲ್ಲದೆ, 2008ರ ಆರಂಭಿಕ ಆವೃತ್ತಿಯ ಬಳಿಕ, ಚೆನ್ನೈನಲ್ಲಿ ಸಿ ಎಸ್ ಕೆ ವಿರುದ್ಧದ ಆರ್ ಸಿ ಬಿ ಯ ಮೊದಲ ಗೆಲುವಾಗಿದೆ.
‘‘ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ, ಆರ್ ಸಿ ಬಿ ಗೆ ಸಮತೋಲನದ ಅಗತ್ಯವಿದೆ ಎಂದು ನಾನು ಹೇಳಿದ್ದೆ. ಅದು ಬೌಲರ್ ಗಳು, ಬ್ಯಾಟರ್ ಗಳು ಅಥವಾ ಫೀಲ್ಡರ್ ಗಳಿಗೆ ಸಂಬಂಧಿಸಿದ್ದಲ್ಲ, ಇದು ಐಪಿಎಲ್ ತಂಡಗಳು ಮತ್ತು ಆಯ್ಕೆಗಳಲ್ಲಿ ಸರಿಯಾದ ಸಮತೋಲನವನ್ನು ಹೊಂದುವುದಕ್ಕೆ ಸಂಬಂಧಿಸಿದ್ದಾಗಿದೆ’’ ಎಂದು ತನ್ನ ಪಾಡ್ ಕಾಸ್ಟ್ ‘ಎಬಿ ಡಿ ವಿಲಿಯರ್ಸ್ 360’ರಲ್ಲಿ ವಿಲಿಯರ್ಸ್ ಹೇಳಿದ್ದಾರೆ.
ವಿಲಿಯರ್ಸ್ ಬಹುತೇಕ ತನ್ನ ಐಪಿಎಲ್ ಪಂದ್ಯಗಳನ್ನು ಆರ್ ಸಿ ಬಿ ಪರವಾಗಿ ಆಡಿದ್ದಾರೆ.
ಹಾಲಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಆರ್ ಸಿ ಬಿ ತನ್ನ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ರನ್ನು ಹೊರಗಿಟ್ಟಿತ್ತು. ‘‘ಇದು ಆಯ್ಕೆಗಳಲ್ಲಿ ಇರುವ ಆಳವನ್ನು ತೋರಿಸುತ್ತದೆ. ಇದು ಈ ಋತುವಿನಲ್ಲಿ ಆರ್ ಸಿ ಬಿ ಯನ್ನು ಬಲಿಷ್ಠ ತಂಡವಾಗಿಸುತ್ತದೆ’’ ಎಂದು ವಿಲಿಯರ್ಸ್ ಹೇಳಿದ್ದರು.
ಸಿ ಎಸ್ ಕೆ ವಿರುದ್ಧದ ಪಂದ್ಯದಲ್ಲಿ ಭುವನೇಶ್ ಕುಮಾರ್ ಪವರ್ ಪ್ಲೇಯಲ್ಲಿ ಅಪಾಯಕಾರಿ ದೀಪಕ್ ಹೂಡ ವಿಕೆಟನ್ನು ಉರುಳಿಸಿದ್ದಾರೆ. ಆಗ ಸಿ ಎಸ್ ಕೆ ಯ ಮೊತ್ತ 3 ವಿಕೆಟ್ ಗಳ ನಷ್ಟಕ್ಕೆ 26 ಆಗಿತ್ತು. ಅಲ್ಲಿಂದ ಅದು ಚೇತರಿಸಿಕೊಳ್ಳಲಿಲ್ಲ. ಗೆಲುವಿಗೆ 197 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಸಿ ಎಸ್ ಕೆ ಗೆ 8 ವಿಕೆಟ್ ಗಳ ನಷ್ಟಕ್ಕೆ 146 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
‘‘ಈ ಬಾರಿ ಆರ್ ಸಿ ಬಿ ಅತ್ಯುತ್ತಮ ಆರಂಭವನ್ನು ಮಾಡಿದೆ. ಅದು ತುಂಬಾ ಚೆನ್ನಾಗಿದೆ. ಈ ಬಾರಿ ಆರ್ ಸಿ ಬಿ ಐಪಿಎಲ್ ಜಯಿಸುವುದೇ ಎಂಬ ಚರ್ಚೆಗೆ ನಾವು ಹೋಗುವುದಿಲ್ಲ. ಆದರೆ, ಇದುವರೆಗೆ ಎಂದೂ ಪಡೆಯದ ಆರಂಭವನ್ನು ಆರ್ ಸಿ ಬಿ ಪಡೆದಿದೆ ಎಂದು ನಾನು ಖಂಡಿತ ಹೇಳುತ್ತೇನೆ. ಇದು ಫಲಿತಾಂಶ ಆಧರಿಸಿ ಹೇಳುವುದಲ್ಲ, ಮುಖ್ಯವಾಗಿ ಹೊರಗಿನ ಪಂದ್ಯಗಳಲ್ಲಿ ತಂಡ ಎಷ್ಟು ಸುಲಲಿತವಾಗಿ ಆಡುತ್ತಿದೆ ಎನ್ನುವುದನ್ನು ನೋಡಿ ಹೇಳುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ವಿಲಿಯರ್ಸ್ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು 2021ರ ಆವೃತ್ತಿಯಲ್ಲಿ ಆಡಿದ್ದರು.