ವರದಿಗಾರರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಸ್ಟೀಫನ್ ಫ್ಲೆಮಿಂಗ್

Stephen Fleming (Image credit: BCCI/IPL)
ಚೆನ್ನೈ: ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರಾಭವಗೊಂಡ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ವರದಿಗಾರರೊಬ್ಬರ ಬಗ್ಗೆ ಅಸಮಾಧಾನಗೊಂಡ ಘಟನೆ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟವನ್ನು ಇತರ ತಂಡಗಳ ಆಟದೊಂದಿಗೆ ಮಾಡಿದ ಹೋಲಿಕೆಯಿಂದ ಅಸಮಾಧಾನಗೊಂಡ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಅವರ ಹೋಲಿಕೆಗೆ ಸಿಡಿಮಿಡಿಗೊಂಡರು. ಪತ್ರಿಕಾಗೋಷ್ಠಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.
“ಟೂರ್ನಿಯ ಮೊದಲ ಪಂದ್ಯದಲ್ಲಿ ನೀವು 156 ರನ್ ಗಳ ಗುರಿಯನ್ನು ಬಹುತೇಕ 20 ಓವರ್ ಗಳಲ್ಲಿ ತಲುಪಿದಿರಿ. ಇಂದು 146 ರನ್ ಗಳಿಸಿದ್ದೀರಿ. ಇಂದು ನಿಮ್ಮ ಕ್ರಿಕೆಟ್ ಶೈಲಿ ಎಂಬುದು ನನಗೆ ತಿಳಿದಿದೆ. ಆದರೆ, ಈ ಮಾದರಿಯು ಪುರಾತನವಾಗಿದೆ ಎಂದು ನಿಮಗನ್ನಿಸುತ್ತಿಲ್ಲವೆ” ಎಂದು ವರದಿಗಾರರೊಬ್ಬರು ಸ್ಟೀಫನ್ ಫ್ಲೆಮಿಂಗ್ ಅವರನ್ನುದ್ದೇಶಿಸಿ ಪ್ರಶ್ನಿಸಿದರು.
ಈ ಪ್ರಶ್ನೆಯಿಂದ ಅಕ್ಷರಶಃ ಕುಪಿತಗೊಂಡ ಸ್ಟೀಫನ್ ಫ್ಲೆಮಿಂಗ್, “ನನ್ನ ಶೈಲಿಯ ಆಟ ಎಂಬ ನಿಮ್ಮ ಮಾತಿನ ಅರ್ಥವೇನು? ನೀವು ಹುಮ್ಮಸ್ಸಿನ ಕುರಿತು ಮಾತನಾಡಿ. ನಾವು ಟೂರ್ನಿಯುದ್ದಕ್ಕೂ ಹುಮ್ಮಸ್ಸನ್ನು ಕಾಯ್ದುಕೊಂಡಿದ್ದೇವೆ. ಮೊದಲನೆಯದಾಗಿ, ನಾವು ಬಾಲ್ ಅನ್ನು ಸ್ವಿಂಗ್ ಮಾಡಲು ಸಾಧ್ಯವಾಗಲಿಲ್ಲ. ಎರಡನೆಯದಾಗಿ, ಪಂದ್ಯ ಗೆಲ್ಲಬೇಕಿದ್ದರೆ, ಕೊಂಚ ಮಟ್ಟಿನ ಅದೃಷ್ಟವೂ ನಮಗಿರಬೇಕಾಗುತ್ತದೆ. ಕೊನೆಯಲ್ಲಿ ಟೂರ್ನಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡುತ್ತಿರಿ. ಇದು ಸಕಾರಾತ್ಮಕ ಶೈಲಿಯ ಕ್ರಿಕೆಟ್ ಆಗಿದೆ. ನಮ್ಮನ್ನು ನಿರ್ಲಕ್ಷಿಸಬೇಡಿ”, ಎಂದು ಕಟುವಾಗಿ ಉತ್ತರಿಸಿದರು.
ಅದಕ್ಕೆ ಪ್ರತಿಯಾಗಿ, ನಾನು ನಿಮ್ಮನ್ನು ನಿರ್ಲಕ್ಷಿಸುತ್ತಿಲ್ಲ ಎಂದು ಆ ವರದಿಗಾರರು ಮರು ಉತ್ತರ ನೀಡಿದರು. ಈ ಉತ್ತರದಿಂದ ಮತ್ತಷ್ಟು ಅಸಮಾಧಾನಗೊಂಡ ಸ್ಟೀಫನ್ ಫ್ಲೆಮಿಂಗ್, “ನಿಮ್ಮ ವರ್ತನೆ ಹಾಗೇ ಇದೆ. ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ” ಎಂದು ಆ ವರದಿಗಾರರ ಮೇಲೆ ಹರಿಹಾಯ್ದರು.
ಇದೇ ವೇಳೆ ತವರು ಕ್ರೀಡಾಂಗಣದ ಲಾಭದ ಕುರಿತು ಇರುವ ಅಭಿಪ್ರಾಯಗಳನ್ನು ಅಲ್ಲಗಳೆದ ಸ್ಟೀಫನ್ ಫ್ಲೆಮಿಂಗ್, ಚೆಪಾಕ್ ಕ್ರೀಡಾಂಗಣ ಸಿಎಸ್ಕೆ ತಂಡದ ಪಾಲಿಗೆ ಸ್ಪಷ್ಟ ಮುನ್ನಡೆ ನೀಡುವ ಕ್ರೀಡಾಂಗಣವಾಗಿ ಉಳಿದಿಲ್ಲ ಎಂದು ವಾದಿಸಿದರು.
ಈ ಪಂದ್ಯದಲ್ಲಿ ಸಿಎಸ್ಕೆ ತಂಡವು ಪಿಚ್ ಅಂದಾಜಿಸುವಲ್ಲಿ ವಿಫಲಗೊಂಡಿತ್ತು.
“ಹಲವಾರು ವರ್ಷಗಳಿಂದ ಸಿಎಸ್ಕೆ ತಂಡಕ್ಕೆ ಚೆಪಾಕ್ ಕ್ರೀಡಾಂಗಣದಲ್ಲಿ ತವರು ನೆಲದ ಅನುಕೂಲತೆಯಿದೆ ಎಂದು ಎಂದು ಹೇಳುತ್ತಾ ಬರಲಾಗುತ್ತಿದೆ. ಆದರೆ, ನಾವು ಚೆಪಾಕ್ ಕ್ರೀಡಾಂಗಣದಿಂದ ಹೊರಗೂ ಒಂದೆರಡು ಬಾರಿ ಗೆಲುವು ಸಾಧಿಸಿದ್ದೇವೆ. ನಮಗೆ ಚೆಪಾಕ್ ಕ್ರೀಡಾಂಗಣದ ಪಿಚ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.