ಟಿ20 ಕ್ರಿಕೆಟ್ | 8 ಸಾವಿರಕ್ಕೂ ಅಧಿಕ ರನ್ ಗಳಿಸಿದ ಭಾರತದ 5ನೇ ಆಟಗಾರ ಸೂರ್ಯಕುಮಾರ್

ಸೂರ್ಯಕುಮಾರ್ | PC : NDTV
ಮುಂಬೈ: ಟಿ20 ಕ್ರಿಕೆಟ್ ನಲ್ಲಿ 8,000 ರನ್ ಪೂರೈಸಿದ ಭಾರತದ 5ನೇ ಆಟಗಾರ ಎನಿಸಿಕೊಂಡಿರುವ ಸೂರ್ಯಕುಮಾರ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.
ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳ ಅಂತರದಿಂದ ಗೆದ್ದಿರುವ ಐಪಿಎಲ್ ಪಂದ್ಯದಲ್ಲಿ ಸೂರ್ಯ ಈ ಸಾಧನೆ ಮಾಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಔಟಾಗದೆ 27 ರನ್ ಗಳಿಸಿದ ಸೂರ್ಯ ಅವರು ಮುಂಬೈ ತಂಡವು ಈ ಋತುವಿನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ತನ್ನದೇ ಆದ ಕೊಡುಗೆ ನೀಡಿದರು.
ಸೂರ್ಯ ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಗಳಿದ್ದವು. ಸಿಕ್ಸರ್ ಸಿಡಿಸುವ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆಲುವು ದಾಖಲಿಸಲು ನೆರವಾದರು.
8,000ಕ್ಕೂ ಅಧಿಕ ಟಿ20 ರನ್ ಗಳಿಸಿರುವ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 12,976 ರನ್‌ಗಳ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ 11,851 ರನ್ ಗಳಿಸಿರುವ ರೋಹಿತ್ ಶರ್ಮಾ ಅವರಿದ್ದಾರೆ. ಶಿಖರ್ ಧವನ್(9,797 ರನ್)ಹಾಗೂ ಸುರೇಶ್ ರೈನಾ(8,654 ರನ್)ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.
ಮುಂಬೈ ತಂಡವು ಸೋಮವಾರ ಕೆಕೆಆರ್ ವಿರುದ್ಧ 24ನೇ ಗೆಲುವು ದಾಖಲಿಸಿತು. ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಗರಿಷ್ಠ ಗೆಲುವಿನ ದಾಖಲೆ ನಿರ್ಮಿಸಿದೆ. ವಾಂಖಡೆ ಸ್ಟೇಡಿಯಮ್ ನಲ್ಲಿ ಕೆಕೆಆರ್ ವಿರುದ್ಧ ಮುಂಬೈನ 10ನೇ ಗೆಲುವು ಇದಾಗಿದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಎದುರಾಳಿಯ ವಿರುದ್ಧ ಗರಿಷ್ಠ ಗೆಲುವು ದಾಖಲಿಸಿ ಮತ್ತೊಂದು ದಾಖಲೆ ನಿರ್ಮಿಸಿದೆ.
ಮುಂಬೈ ತಂಡವ್ನ ಕೆಕೆಆರ್ ತಂಡವನ್ನು ಕೇವಲ 116 ರನ್ ಗೆ ನಿಯಂತ್ರಿಸಿತು. 23ರ ಹರೆಯದ ಎಡಗೈ ವೇಗಿ ಅಶ್ವನಿ ಕುಮಾರ್ 24 ರನ್ ಗೆ 4 ವಿಕೆಟ್ ಗಳನ್ನು ಪಡೆದು ಮಿಂಚಿದರು. ರಿಕೆಲ್ಟನ್ ಔಟಾಗದೆ 62 ರನ್ ಗಳಿಸಿ ಮುಂಬೈ ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸಲು ನೆರವಾದರು. ಈ ಗೆಲುವಿನ ಮೂಲಕ ಮುಂಬೈ ಸತತ 2 ಸೋಲಿನಿಂದ ಹೊರ ಬಂತು.
►ಟಿ20 ಕ್ರಿಕೆಟ್ ನಲ್ಲಿ 8,000ಕ್ಕೂ ಅಧಿಕ ರನ್ ಗಳಿಸಿದ ಭಾರತೀಯ ಆಟಗಾರರು
ವಿರಾಟ್ ಕೊಹ್ಲಿ-12,976 ರನ್
ರೋಹಿತ್ ಶರ್ಮಾ-11,851 ರನ್
ಶಿಖರ್ ಧವನ್-9,797 ರನ್
ಸುರೇಶ್ ರೈನಾ-8,654 ರನ್
ಸೂರ್ಯಕುಮಾರ್ ಯಾದವ್-8,007 ರನ್