ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ 2025 | ಭಾರತದ ಸವಾಲು ಅಂತ್ಯ

ಧ್ರುವ ಕಪಿಲ ಮತ್ತು ತನಿಶಾ ಕ್ರಾಸ್ಟೊ | PC : PTI
ನಿಂಗ್ಬೊ (ಚೀನಾ): ಚೀನಾದ ನಿಂಗ್ಬೊದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಶ್ಯಾ ಚಾಂಪಿಯನ್ ಶಿಪ್ಸ್ ನಲ್ಲಿ, ಶುಕ್ರವಾರ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಧ್ರುವ ಕಪಿಲ ಮತ್ತು ತನಿಶಾ ಕ್ರಾಸ್ಟೊ ಜೋಡಿ ನೇರ ಗೇಮ್ ಗಳಿಂದ ಸೋಲನುಭವಿಸಿದೆ.
ಅವರ ನಿರ್ಗಮನದೊಂದಿಗೆ, ಪಂದ್ಯಾವಳಿಯಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿದೆ.
18ನೇ ವಿಶ್ವ ರ‍್ಯಾಂಕಿಂಗ್ ನ ಭಾರತೀಯ ಜೋಡಿಯನ್ನು ಹಾಂಕಾಂಗ್ನ ಐದನೇ ವಿಶ್ವ ರ‍್ಯಾಂಕಿಂಗ್ ನ ಜೋಡಿ ತಂಗ್ ಚುನ್ ಮನ್ ಮತ್ತು ಟ್ಸೆ ಯಿಂಗ್ ಸುಯೆಟ್ 22-20, 21-13 ಗೇಮ್ ಗಳಿಂದ ಮಣಿಸಿದರು. ಪಂದ್ಯವು 41 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.
ಮೊದಲ ಗೇಮ್ನ ಆರಂಭದಲ್ಲಿ ಭಾರತೀಯ ಜೋಡಿಯು ಮುನ್ನಡೆಯಲ್ಲಿತ್ತು. ಒಂದು ಹಂತದಲ್ಲಿ ಅದು 8-0 ಮುನ್ನಡೆ ಗಳಿಸಿತ್ತು. ಆದರೆ ಬಳಿಕ ಎದುರಾಳಿ ಜೋಡಿಯು ತೀವ್ರ ಪ್ರತಿಹೋರಾಟ ನೀಡಿ ಅಂಕವನ್ನು 10-10ರ ಸಮಬಲಕ್ಕೆ ಒಯ್ಯಿತು. ಬಳಿಕ ಸಮಬಲದ ಹೋರಾಟವನ್ನು ಉಭಯ ಜೋಡಿಗಳು ನೀಡಿದರು. ಆ ಹಂತದಲ್ಲಿ ಅಂಕವು 19-19ರ ಸಮಬಲದಲ್ಲಿತ್ತು. ಆದರೆ, ಬಳಿಕ ತಂಗ್ ಮತ್ತು ಟ್ಸೆ ಮುನ್ನುಗ್ಗಿ ಮೊದಲ ಗೇಮನ್ನು ಜಯಿಸಿದರು.
ಎರಡನೇ ಗೇಮ್ ನಲ್ಲಿಯೂ, ಆರಂಭದಲ್ಲಿ ಭಾರತೀಯ ಜೋಡಿಯು ತೀವ್ರ ಪೈಪೋಟಿಯನ್ನು ನೀಡಿತು. ಒಂದು ಹಂತದಲ್ಲಿ ಅಂಕವು 9-9ರಲ್ಲಿ ಸಮಬಲವಾಗಿತ್ತು. ಆದರೆ, ಆ ಬಳಿಕ ಹಾಂಕಾಂಗ್ ಜೋಡಿಯು ಸತತ ಎಂಟು ಅಂಕಗಳನ್ನು ಸಂಪಾದಿಸಿತು. ಆ ಅಂತರವನ್ನು ಮುಚ್ಚಲು ಭಾರತೀಯ ಜೋಡಿಗೆ ಸಾಧ್ಯವಾಗಲಿಲ್ಲ.