ಅನುಮಾನಾಸ್ಪದ ತೀರ್ಪಿಗೆ ಧೋನಿ ಬಲಿ: ಐಪಿಎಲ್ ನಲ್ಲಿ ಮತ್ತೊಂದು ವಿವಾದ

PC: x.com/toisports
ಹೊಸದಿಲ್ಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿಯವರು ವಿವಾದಾತ್ಮಕ ತೀರ್ಪಿಗೆ ಬಲಿಯಾದ ಬಗ್ಗೆ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸಾಮಾನ್ಯವಾಗಿ ಧೋನಿಯವರ ಡಿಆರ್‌ಎಸ್ ಕರೆಗಳು ವಿಫಲವಾಗುವುದಿಲ್ಲ. ಆದರೆ ಶುಕ್ರವಾರದ ಪಂದ್ಯದಲ್ಲಿನ ನಿರ್ಧಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆ ಪಂದ್ಯದ 16ನೇ ಓವರ್‌ನಲ್ಲಿ ನಡೆದಿದ್ದು, ಸುನಿಲ್ ನರೇನ್ ಅವರ ಎಸೆತದಲ್ಲಿ ಧೋನಿ ಎಲ್‌ಬಿಡಬ್ಲ್ಯು ಔಟ್ ಎಂದು ಅಂಪೈರ್ ತೀರ್ಪು ನೀಡಿದರು.
ಅಂಪೈರ್ ನಿರ್ಧಾರದ ಪರಾಮರ್ಶೆಗೆ ಧೋನಿ ಮನವಿ ಸಲ್ಲಿಸಿದರು. ಅಲ್ಟ್ರಾಎಡ್ಜ್ ವಿಶ್ಲೇಷಣೆಯಲ್ಲಿ ಚೆಂಡು ಬ್ಯಾಟಿಗೆ ತಾಗಿದ್ದು ಸ್ಪಷ್ಟವಾಗಿ ಕಂಡುಬಂದಿತು. ಆದರೂ ಸುಧೀರ್ಘ ಸಮಾಲೋಚನೆ ಬಳಿಕ ಮೂರನೇ ಅಂಪೈರ್ ತೀರ್ಪು ನೀಡಿ ಚೆಂಡು ಬ್ಯಾಟಿಗೆ ಬಡಿದಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಬಾಲ್ ಟ್ರ್ಯಾಕರ್ ನಲ್ಲಿ ಮೂರು ಕೆಂಪು ಬಣ್ಣ ಕಾಣಿಸಿಕೊಂಡ ಕಾರಣ ಧೋನಿ ಔಟ್ ಎಂದು ನಿರ್ಧರಿಸಲಾಯಿತು. ಚಿಪಾಕ್ ನಲ್ಲಿ ಸೇರಿದ್ದ ಅಭಿಮಾನಿಗಳಿಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ.
ಈ ನಿರ್ಧಾರದಿಂದ ತವರಿನ ಅಭಿಮಾನಿಗಳು ಆಘಾತಕ್ಕೀಡಾದರು. ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಧೋನಿ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ನಿರಾಸೆಯಿಂದ ಹಿಂದಿರುಗಿದರು. ಈ ಪಂದ್ಯದಲ್ಲಿ ಸಿಎಸ್‌ಕೆ 8 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಿಪಾಕ್ ನಲ್ಲಿ ಸತತ ಮೂರನೇ ಸೋಲನ್ನು ಸಿಎಸ್‌ಕೆ ದಾಖಲಿಸಿತು. ಇದು ಈ ಸೀಸನ್ ನಲ್ಲಿ ಐದನೇ ಸೋಲಾಗಿದ್ದು, ಪಾಯಿಂಟ್ ಟೇಬಲ್ ನಲ್ಲಿ ಕೊನೆಯ ಸ್ಥಾನವನ್ನು ಸಿಎಸ್‌ಕೆ ಖಾತರಿಪಡಿಸಿಕೊಂಡಿತು.