ಪತ್ರಕರ್ತ ಸಿದ್ದೀಕ್ ಕಪ್ಪನ್ ಮನೆಗೆ ಪೊಲೀಸರ ಭೇಟಿ!
ಮಲಪ್ಪುರಂ: 'ಮಧ್ಯರಾತ್ರಿ ಮನೆಗೆ ಭೇಟಿ ನೀಡುತ್ತೇವೆ' ಎಂದು ಪತ್ರಕರ್ತ ಸಿದ್ದೀಕ್ ಕಪ್ಪನ್ ಕುಟುಂಬಕ್ಕೆ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ನಾಗರಿಕ ಹಕ್ಕುಗಳ ಸಂಘಟನೆಗಳು, ಮಾಧ್ಯಮ ಸಂಘಟನೆಗಳು ಹಾಗೂ ಸಿದ್ದಿಕಿ ಕಪ್ಪನ್ ಕುಟುಂಬ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ವೆಂಗಾರದಲ್ಲಿರುವ ಸಿದ್ದೀಕ್ ಕಪ್ಪನ್ ಮನೆಗೆ ಎಪ್ರಿಲ್ 13ರಂದು ಸಂಜೆ 6:30ರ ವೇಳೆಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು ಎಂದು ಸಿದ್ದೀಕ್ ಪತ್ನಿ ರೈಹಾನತ್ ಹೇಳಿದ್ದಾರೆ.
ಇವರು ವೆಂಗಾರ ಹಾಗೂ ತಿರೂರ್ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದು, ಕಪ್ಪನ್ ಉಪಸ್ಥಿತಿಯ ಪರಿಶೀಲನೆಗೆ ಮಧ್ಯರಾತ್ರಿ ಮಲಪ್ಪುರಂ ಪೊಲೀಸ್ ಠಾಣೆಯ ತಂಡವೊಂದು ಮನೆಗೆ ನೀಡಲಿದೆ ಎಂದಿದ್ದಾಗಿ ರೈಹಾನತ್ ಹೇಳಿದ್ದಾರೆ.
ಈ ಭೇಟಿಯ ಕುರಿತು ಯಾವುದೇ ಸ್ಪಷ್ಟ ಕಾರಣ ನೀಡದ ಅಧಿಕಾರಿಗಳು, ಇದು ಕಪ್ಪನ್ ಅವರ ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಾಮಾನ್ಯ ಪರಿಶೀಲನೆ ಎಂದು ತಿಳಿಸಿದ್ದಾರೆ ಎಂದು ರೈಹಾನತ್ ಮಾಹಿತಿ ನೀಡಿದ್ದಾರೆ.
“ಸಿದ್ದೀಕ್ ಮನೆಯಲ್ಲಿದ್ದಾರೆಯೇ? ಮತ್ತು ರಾತ್ರಿ 12 ಗಂಟೆಯ ನಂತರವೂ ಇರುತ್ತಾರೆಯೇ ಎಂದು ಅಧಿಕಾರಿಗಳು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ, ಇಂತಹ ತಡ ರಾತ್ರಿ ಭೇಟಿಯ ಉದ್ದೇಶವೇನು ಮತ್ತು ಈ ಭೇಟಿ ಈಡಿ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ ಸಂಬಂಧಿಸಿದೆಯೆ ಎಂದು ನಾವು ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸದೆ ಇದು 'ಸಾಮಾನ್ಯ ಪ್ರಕ್ರಿಯೆ' ಎಂದು ಹೇಳಿದ್ದಾರೆ. ಆದರೆ ಇದು ಸಾಮಾನ್ಯ ಭೇಟಿಯ ಹಾಗೆ ಇರಲಿಲ್ಲ ಎಂದು ರೈಹಾನತ್ ಆರೋಪಿಸಿದ್ದಾರೆ.
ಯುಎಪಿಎ ಕಾಯ್ದೆಯಡಿ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲ ಉತ್ತರ ಪ್ರದೇಶದ ಜೈಲಿನಲ್ಲಿದ್ದು, 2023ರ ಫೆಬ್ರವರಿಯಲ್ಲಿ ಸಿದ್ದೀಕ್ ಕಪ್ಪನ್ ಬಿಡುಗಡೆಯಾಗಿದ್ದರು.
“ವೆಂಗಾರಾ ಪೊಲೀಸ್ ಠಾಣೆಗೆ ನನ್ನ ಮನೆಯಿಂದ ಕೇವಲ ಎರಡೂವರೆ ಕಿ.ಮೀ. ದೂರ ಮಾತ್ರವಿದೆ. ಅವರಿಗೇನಾದರೂ ಪರಿಶೀಲಿಸಬೇಕಿದ್ದರೆ, ನನಗೆ ಕರೆ ಮಾಡಬಹುದಿತ್ತು. ಅದರ ಬದಲು, ಅವರು ನನ್ನ ಕುರಿತು ನೆರೆಹೊರೆಯವರನ್ನು ವಿಚಾರಿಸುವ ಮೂಲಕ, ಗಾಬರಿ ಸೃಷ್ಟಿಸಿದ್ದಾರೆ. ನನ್ನ ನಿವಾಸದ ಬಳಿಗೆ ಬಂದಾಗ, ನೀವೇನಾ ಸಿದ್ದಿಕಿ ಕಪ್ಪನ್ ಎಂದು ಪ್ರಶ್ನಿಸಿದರು. ಅವರನ್ನು ನನ್ನ ಮನೆಗೆ ಆಹ್ವಾನಿಸಿದೆ. ನನ್ನ ಆಹ್ವಾನವನ್ನು ನಿರಾಕರಿಸಿದ ಅವರು ನಿಯಮಿತ ಪರಿಶೀಲನೆಗಾಗಿ ತಂಡವೊಂದು ಮತ್ತೆ ಮಧ್ಯ ರಾತ್ರಿ ಮನೆಗೆ ಬರುತ್ತದೆ ಎಂದು ಹೇಳಿದರು. ಆದರೆ, ಆ ವೇಳೆಯಲ್ಲಿ ಪೊಲೀಸರು ಭೇಟಿ ನೀಡುವುದು ಸಹಜ ಎನಿಸಲಿಲ್ಲ ” ಎಂದು ಸಿದ್ದೀಕ್ ಕಪ್ಪನ್ ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಈ ಕ್ರಮವನ್ನು ಪತ್ರಕರ್ತರ ಸಂಘಗಳು, ನಾಗರಿಕ ಹಕ್ಕುಗಳ ಸಂಘಟನೆಗಳು ಟೀಕಿಸಿವೆ. ಕಪ್ಪನ್ ಅವರು ಸದಸ್ಯರಾಗಿರುವ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದೆ.