ಎಟಿಪಿ ರ‍್ಯಾಂಕಿಂಗ್: ದ್ವಿತೀಯ ಸ್ಥಾನಕ್ಕೆ ಮರಳಿದ ಅಲ್ಕರಾಝ್

Photo Credit: REUTERS
ಹೊಸದಿಲ್ಲಿ, ಎ.14: ಮೋಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಜಯಿಸಿದ ನಂತರ ಕಾರ್ಲೊಸ್ ಅಲ್ಕರಾಝ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್ನಲ್ಲಿ ದ್ವಿತೀಯ ಸ್ಥಾನಕ್ಕೆ ಮರಳಿದ್ದಾರೆ.
ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್, ಸ್ಪೇನ್ ಆಟಗಾರ ಅಲ್ಕರಾಝ್ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಟಲಿಯ ಲೊರೆಂರೊ ಮುಸೆಟ್ಟಿ ಅವರನ್ನು 3-6, 6-1, 6-0 ಸೆಟ್ಗಳ ಅಂತರದಿಂದ ಮಣಿಸಿದರು. ಎಟಿಪಿ 1000 ಟೂರ್ನಿಯಲ್ಲಿ ತನ್ನ ಆರನೇ ಪ್ರಶಸ್ತಿ ಬಾಚಿಕೊಂಡರು.
ಮಾಸ್ಟರ್ಸ್ ಟೂರ್ನಿಯ ಲ್ಲಿ ಮೊದಲ ಬಾರಿ ಫೈನಲ್ನಲ್ಲಿ ಕಾಣಿಸಿಕೊಂಡಿರುವ 23ರ ಹರೆಯದ ಇಟಲಿ ಆಟಗಾರ ಮುಸೆಟ್ಟಿ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದರು.
2ನೇ ಸುತ್ತಿನಲ್ಲಿ ಇಟಲಿಯ ಮೊಟ್ಟೆಯೊ ಬೆರ್ರೆಟ್ಟಿನಿ ವಿರುದ್ಧ್ದ ಸೋತಿರುವ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ 2ರಿಂದ 3ನೇ ಸ್ಥಾನಕ್ಕೆ ಕುಸಿದರು.
ಸೆಮಿ ಫೈನಲ್ಗೆ ತಲುಪಿದ್ದ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ 7ನೇ ಸ್ಥಾನಕ್ಕೇರಿದ್ದಾರೆ. ಒಂದು ಸ್ಥಾನ ಭಡ್ತಿ ಪಡೆದಿರುವ ಆಂಡ್ರೆ ರುಬ್ಲೆವ್ 8ನೇ ಸ್ಥಾನಕ್ಕೇರಿದರೆ, ಡೇನಿಯಲ್ ಮೆಡ್ವೆಡೆವ್ ಟಾಪ್-10ಕ್ಕೆ ವಾಪಸಾದರು.
3 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದ ನಂತರ 3 ತಿಂಗಳಿಂದ ಟೆನಿಸ್ನಿಂದ ದೂರ ಉಳಿದಿದ್ದರೂ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಎಟಿಪಿ ಟಾಪ್-10
1.ಜನ್ನಿಕ್ ಸಿನ್ನರ್(ಇಟಲಿ)
2. ಕಾರ್ಲೊಸ್ ಅಲ್ಕರಾಝ್(ಸ್ಪೇನ್)
3. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)
4.ಟೇಲರ್ ಫ್ರಿಟ್ಝ್(ಅಮೆರಿಕ)
5. ನೊವಾಕ್ ಜೊಕೊವಿಕ್(ಸರ್ಬಿಯ)
6. ಜಾಕ್ ಡ್ರೇಪರ್(ಜರ್ಮನಿ)
7. ಅಲೆಕ್ಸ್ ಡಿ ಮಿನೌರ್(ಆಸ್ಟ್ರೇಲಿಯ)
8. ಆಂಡ್ರೆ ರುಬ್ಲೇವ್
9. ಡೇನಿಯಲ್ ಮೆಡ್ವೆಡೆವ್
10. ಕಾಸ್ಪರ್ ರೂಡ್(ನಾರ್ವೆ)