ಐಪಿಎಲ್ | ನಾಯಕನಾಗಿ 2 ದಾಖಲೆಗಳನ್ನು ನಿರ್ಮಿಸಿದ ಧೋನಿ

ಮಹೇಂದ್ರ ಸಿಂಗ್ ಧೋನಿ | PC ; PTI
ಚೆನ್ನೈ: ಶುಕ್ರವಾರ ನಡೆದ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಂಡದ ನಾಯಕತ್ವವನ್ನು ಧೋನಿ ವಹಿಸಿದರು. ಧೋನಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಪ್ರಶಸ್ತಿಗಳನ್ನು ಜಯಿಸಿದೆ.
ಅದೂ ಅಲ್ಲದೆ, ಧೋನಿ ಐಪಿಎಲ್ನಲ್ಲಿ ಇನ್ನೂ ಎರಡು ದಾಖಲೆಗಳನ್ನು ಮುರಿದಿದ್ದಾರೆ. ಐಪಿಎಲ್ನಲ್ಲಿ ತಂಡವೊಂದರ ನಾಯಕತ್ವವನ್ನು ವಹಿಸಿದ ಮೊದಲ ‘ಅನ್ಕ್ಯಾಪ್ಡ್ ಆಟಗಾರ’ ಅವರಾಗಿದ್ದಾರೆ. ಧೋನಿ 500ಕ್ಕಿಂತಲೂ ಅಧಿಕ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿರುವರಾದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ನಿಯಮದಿಂದಾಗಿ ಅವರು ‘ಅನ್ಕ್ಯಾಪ್ಡ್ ಆಟಗಾರ’ ಆಗಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಧೋನಿ ಯಾವುದೇ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಡದಿರುವುದರಿಂದ, ನೂತನ ನಿಯಮದಂತೆ ಅವರು ‘ಅನ್ಕ್ಯಾಪ್ಡ್ ಆಟಗಾರ’ ಆಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ನಾಯಕನಾಗುವ ಮೂಲಕ ಅವರು ಇನ್ನೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. 43 ವರ್ಷದ ಧೋನಿ ತನ್ನದೇ ದಾಖಲೆಯನ್ನು ಮುರಿದಿದ್ದಾರೆ. 2023ರ ಋತುವಿನಲ್ಲಿ, 41 ವರ್ಷ 325 ದಿನಗಳ ಪ್ರಾಯದ ಧೋನಿ ಐಪಿಎಲ್ ನಲ್ಲಿ ತಂಡವೊಂದರ ನಾಯಕತ್ವ ವಹಿಸಿದ ಅತ್ಯಂತ ಹಿರಿಯ ಆಟಗಾರನಾಗಿದ್ದರು.