2031ರ ಎ ಎಫ್ ಸಿ ಏಷ್ಯನ್ ಕಪ್ ಫುಟ್ಬಾಲ್ ಗೆ ಭಾರತದಿಂದ ಬಿಡ್ ಸಲ್ಲಿಕೆ

PC : olympics.com
ಹೊಸದಿಲ್ಲಿ: 2031ರ ಎ ಎಫ್ ಸಿ ಏಶ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯಕ್ಕಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧಿಕೃತವಾಗಿ ಬಿಡ್ ಸಲ್ಲಿಸಿದೆ. ಇದರೊಂದಿಗೆ, ಈ ಏಶ್ಯ ಮಟ್ಟದ ಅತ್ಯುನ್ನತ ಪಂದ್ಯಾವಳಿಯ ಆಯೋಜನೆಗಾಗಿ ಸಲ್ಲಿಸಲ್ಪಟ್ಟಿರುವ ಬಿಡ್ ಗಳ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ.
ಈ ಕ್ರೀಡಾಕೂಟಕ್ಕಾಗಿ ಬಿಡ್ ಸಲ್ಲಿಸುವಂತೆ ಕೋರಿ ಎ ಎಫ್ ಸಿ ಸದಸ್ಯ ರಾಷ್ಟ್ರಗಳಿಗೆ ಕಳೆದ ವರ್ಷದ ನವೆಂಬರ್ 27ರಂದು ಆಹ್ವಾನಗಳನ್ನು ಕಳುಹಿಸಲಾಗಿತ್ತು.
ಕ್ರೀಡಾಕೂಟದ ಆಯೋಜನೆಗಾಗಿ ಒಂದು ಜಂಟಿ ಬಿಡ್ ಸೇರಿದಂತೆ ಏಳು ಬಿಡ್ ಗಳನ್ನು ಸ್ವೀಕರಿಸಲಾಗಿದೆ ಎಂದು ಕೌಲಾಲಂಪುರದಲ್ಲಿ ನಡೆದ ಎ ಎಫ್ ಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎ ಎಫ್ ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಬಿನ್ ಇಬ್ರಾಹೀಮ್ ಅಲ್ ಖಲೀಫ ಘೋಷಿಸಿದರು. ಬಿಡ್ ಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿತ್ತು.
ಭಾರತವಲ್ಲದೆ, ಆಸ್ಟ್ರೇಲಿಯ, ಇಂಡೋನೇಶ್ಯ, ದಕ್ಷಿಣ ಕೊರಿಯ, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ ಕ್ರೀಡಾಕೂಟಕ್ಕಾಗಿ ಬಿಡ್ ಗಳನ್ನು ಸಲ್ಲಿಸಿವೆ. ಅದೂ ಅಲ್ಲದೆ, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಝ್ಬೆಕಿಸ್ತಾನ್ ದೇಶಗಳು ಜಂಟಿ ಬಿಡ್ ಸಲ್ಲಿಸಿವೆ.
ಪಂದ್ಯಾವಳಿಯ ಆಯೋಜನೆಗೆ ವ್ಯಕ್ತವಾಗಿರುವ ಅಭೂತಪೂರ್ವ ಆಸಕ್ತಿಯನ್ನು ಶೇಖ್ ಸಲ್ಮಾನ್ ಶ್ಲಾಘಿಸಿದರು. ಇದು ಪಂದ್ಯಾವಳಿಯ ಹೆಚ್ಚುತ್ತಿರುವ ಜನಪ್ರಿಯತೆ, ಅದರಲ್ಲೂ ಮುಖ್ಯವಾಗಿ 2023ರಲ್ಲಿ ಖತರ್ ನಲ್ಲಿ ನಡೆದ ದಾಖಲೆ ಸೃಷ್ಟಿಸಿದ ಪಂದ್ಯಾವಳಿಯ ಫಲಶ್ರುತಿಯಾಗಿದೆ ಎಂದು ಅವರು ನುಡಿದರು. ಖತರ್ ನಲ್ಲಿ ನಡೆದ ಏಶ್ಯನ್ ಕಪ್ ಜಗತ್ತಿನಾದ್ಯಂತ 790 ಕೋಟಿ ಡಿಜಿಟಲ್ ಇಂಪ್ರೆಶನ್ಗಳನ್ನು ಸಾಧಿಸಿದೆ.
ಇನ್ನು ಎ ಎಫ್ ಸಿ ಯು ಅಗತ್ಯ ದಾಖಲೆಗಳಿಗಾಗಿ ಬಿಡ್ಡುದಾರ ದೇಶಗಳೊಂದಿಗೆ ವ್ಯವಹರಿಸಲಿದೆ. ಅದಕ್ಕಾಗಿ ಈ ತಿಂಗಳ ಕೊನೆಯಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಿದೆ. 2026ರಲ್ಲಿ ನಡೆಯಲಿರುವ ಎ ಎಫ್ ಸಿ ಕಾಂಗ್ರೆಸ್ ನಲ್ಲಿ ಆತಿಥೇಯ ದೇಶಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.
ಯಶಸ್ವಿಯಾದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಎ ಎಫ್ ಸಿ ಏಶ್ಯನ್ ಕಪ್ ಪಂದ್ಯಾವಳಿಯ ಆತಿಥ್ಯವನ್ನು ವಹಿಸಲಿದೆ. ಇದು ಭಾರತೀಯ ಫುಟ್ಬಾಲ್ನ ಪ್ರಮುಖ ಮೈಲಿಗಲ್ಲಾಗಲಿದೆ.