ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅಶ್ವನಿ ಕುಮಾರ್

ಅಶ್ವನಿ ಕುಮಾರ್ | PC : PTI
ಮುಂಬೈ: ಐಪಿಎಲ್ ಟಿ20 ಟೂರ್ನಿಯಲ್ಲಿ ಆಡಿರುವ ತನ್ನ ಮೊತ್ತ ಮೊದಲ ಪಂದ್ಯದಲ್ಲಿ ಪಂಜಾಬ್ ಬೌಲರ್ ಅಶ್ವನಿ ಕುಮಾರ್ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಎಡಗೈ ವೇಗದ ಬೌಲರ್ ಕುಮಾರ್ ಸೋಮವಾರ ವಾಂಖೆಡೆ ಸ್ಟೇಡಿಯಮ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಎಸೆತದಲ್ಲಿ ವಿಕೆಟ್ ಉರುಳಿಸಿದ್ದಲ್ಲದೆ, 3 ಓವರ್ ಗಳ ಸ್ಪೆಲ್ ನಲ್ಲಿ 24 ರನ್ ನೀಡಿ 4 ವಿಕೆಟ್ ಗಳನ್ನು ತನ್ನದಾಗಿಸಿಕೊಂಡರು.
ಮೊಹಾಲಿಯ ವೇಗದ ಬೌಲರ್ ಕುಮಾರ್ 4 ವಿಕೆಟ್ ಗೊಂಚಲು ಕಬಳಿಸಿ ಬ್ಯಾಟಿಂಗ್ ಸ್ನೇಹಿ ವಾಂಖೆಡೆ ಕ್ರೀಡಾಂಗಣದ ಪಿಚ್ ನಲ್ಲಿ ಕೆಕೆಆರ್ ತಂಡವನ್ನು 116 ರನ್ ಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಗೆಲ್ಲಲು ಸುಲಭ ಸವಾಲು ಪಡೆದ ಮುಂಬೈ ತಂಡವನ್ನು ರಿಕೆಲ್ಟನ್ ಹಾಗೂ ಸೂರ್ಯಕುಮಾರ್ ಯಾದವ್ ಗೆಲುವಿನ ದಡ ಸೇರಿಸಿದರು.
23ರ ಹರೆಯದ ಅಶ್ವನಿ ಕುಮಾರ್ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್, ಮನೀಶ್ ಪಾಂಡೆ ಹಾಗೂ ಆಂಡ್ರೆ ರಸೆಲ್ ವಿಕೆಟ್ ಗಳನ್ನು ಕಬಳಿಸಿದರು.
ಆಟಗಾರರ ಹರಾಜಿನಲ್ಲಿ 30 ಲಕ್ಷ ರೂ.ಗೆ ಮುಂಬೈ ತಂಡವನ್ನು ಸೇರಿದ್ದ ಅಶ್ವನಿ ಕುಮಾರ್ ಇದೀಗ 4 ವಿಕೆಟ್ ಉರುಳಿಸಿ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ನ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಆತಂಕದಿಂದ ಊಟವನ್ನೇ ಮಾಡದ ಅಶ್ವನಿ, ಪಂದ್ಯಕ್ಕೆ ಮೊದಲು ನಾನು ಬಾಳೆಹಣ್ಣು ಮಾತ್ರ ಸೇವಿಸಿದ್ದೆ ಎಂದು ಹೇಳಿದ್ದಾರೆ.
ಅಶ್ವನಿ ಅವರ ಮೊದಲ ಎಸೆತದಲ್ಲೇ ರಹಾನೆ ಔಟಾದರು. 2ನೇ ಓವರ್ ನಲ್ಲಿ ರಿಂಕು ಸಿಂಗ್ ವಿಕೆಟ್ ಒಪ್ಪಿಸಿದರು. 3 ಎಸೆತಗಳ ನಂತರ ಮನೀಶ್ ವಿಕೆಟ್ ಒಪ್ಪಿಸಿದರು. ರಸೆಲ್ ಅವರು ಅಶ್ವನಿ 4ನೇ ಹಾಗೂ ಕೊನೆಯ ಬಲಿಪಶುವಾದರು.
‘‘ನನಗೆ ಈ ಅವಕಾಶ ಲಭಿಸಿದ್ದು ಹಾಗೂ ಈ ಪ್ರಶಸ್ತಿ ಸಿಗುತ್ತಿರುವುದು ಪ್ರಮುಖ ವಿಚಾರವಾಗಿದೆ. ನನ್ನ ಕೆಲಸ ನಾನು ಮಾಡಿದ್ದೆ. ಇದನ್ನೆಲ್ಲಾ ಎಂದಿಗೂ ಯೋಚಿಸಿರಲಿಲ್ಲ. ಈ ಪ್ರಶಸ್ತಿ ಗೆದ್ದಿರುವುದಕ್ಕೆ ಖುಷಿ ಇದೆ. ಮೊಹಾಲಿ ಜಿಲ್ಲೆಯ ಝಂಝೇರಿಯವನಾದ ನಾನು ಕಠಿಣ ಪರಿಶ್ರಮ ಹಾಗೂ ದೇವರ ದಯೆಯಿಂದ ಇಲ್ಲಿದ್ದೇನೆ’’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಅಶ್ವನಿ ಹೇಳಿದರು.
►ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅಶ್ವನಿ ಕುಮಾರ್ ಸಾಧನೆ
4/24: ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಗೊಂಚಲು(4-24)ಪಡೆದ ಭಾರತದ ಮೊದಲ ಬೌಲರ್ ಅಶ್ವನಿ.
6: ಅಶ್ವನಿ ಸಹಿತ ಕೇವಲ ಆರು ಬೌಲರ್ ಗಳು ಮಾತ್ರ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. ಪಟ್ಟಿಯಲ್ಲಿ ಅಲ್ಝಾರಿ ಜೋಸೆಫ್(6-12), ಆಂಡ್ರೆ ಟೈ(5-17)ಹಾಗೂ ಶುಐಬ್ ಅಖ್ತರ್(4-11)ಅವರಿದ್ದಾರೆ.
15: ಐಪಿಎಲ್ ನಲ್ಲಿ ಅಶ್ವನಿ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದ 15ನೇ ಬೌಲರ್ ಆಗಿದ್ದಾರೆ. ಮಥೀಶ ಪಥಿರನ ಈ ಸಾಧನೆ ಮಾಡಿದ ಕೊನೆಯ ಬೌಲರ್. ಹನುಮ ವಿಹಾರಿ ಈ ಸಾಧನೆ ಗೈದ ಕೊನೆಯ ಭಾರತೀಯ ಬೌಲರ್.