IPL 2025 | ಲಕ್ನೊ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ

PC | @IPL
ಲಕ್ನೊ : ಪ್ರಭ್‌ಸಿಮ್ರನ್ ಸಿಂಗ್(69 ರನ್, 34 ಎಸೆತ, 9 ಬೌಂಡರಿ, 3 ಸಿಕ್ಸರ್), ಶ್ರೇಯಸ್ ಅಯ್ಯರ್( ಔಟಾಗದೆ 52 ರನ್, 30 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕ, ಅರ್ಷದೀಪ್ ಸಿಂಗ್(3-43) ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಐಪಿಎಲ್ ಟ್ವೆಂಟಿ-20 ಟೂರ್ನಿಯ 13ನೇ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ.
ಮಂಗಳವಾರ ಟಾಸ್ ಜಯಿಸಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆತಿಥೇಯ ಲಕ್ನೊ ತಂಡ ಆರಂಭಿಕ ಕುಸಿತ ಕಂಡಿದ್ದರೂ ಆಯುಷ್ ಬದೋನಿ(41 ರನ್, 33 ಎಸೆತ, 1 ಬೌಂಡರಿ, 3 ಸಿಕ್ಸರ್)ಹಾಗೂ ಅಬ್ದುಲ್ ಸಮದ್(27 ರನ್, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.
ಗೆಲ್ಲಲು 172 ರನ್ ಗುರಿ ಪಡೆದ ಪಂಜಾಬ್ ತಂಡವು 16.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಪಂಜಾಬ್ ತಂಡ ಪ್ರಿಯಾಂಶ್ ಆರ್ಯ(8 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್‌ಗೆ 84 ರನ್ ಸೇರಿಸಿದ ಸಿಂಗ್ ಹಾಗೂ ಅಯ್ಯರ್ ತಂಡವನ್ನು ಆಧರಿಸಿದರು. ಸಿಂಗ್ ಔಟಾದ ನಂತರ ಅಯ್ಯರ್ ಹಾಗೂ ನೇಹಾಲ್(ಔಟಾಗದೆ 43 ರನ್, 25 ಎಸೆತ, 3 ಬೌಂಡರಿ, 4 ಸಿಕ್ಸರ್) 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ನಾಯಕ ನಿರ್ಧಾರವನ್ನು ಸಮರ್ಥಿಸಿದ ಅರ್ಷದೀಪ್ ಸಿಂಗ್ ಇನಿಂಗ್ಸ್‌ನ 4ನೇ ಎಸೆತದಲ್ಲಿ ಲಕ್ನೊದ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್(0)ವಿಕೆಟನ್ನು ಉರುಳಿಸಿದರು. ನಿಕೊಲಸ್ ಪೂರನ್(44 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ಮರ್ಕ್ರಮ್(28 ರನ್, 18 ಎಸೆತ, 4 ಬೌಂಡರಿ, 1 ಸಿಕ್ಸರ್)2ನೇ ವಿಕೆಟ್‌ಗೆ 31 ರನ್ ಸೇರಿಸಿ ತಂಡವನ್ನು ಆಧರಿಸಿದರು. ಮರ್ಕ್ರಮ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ಫರ್ಗ್ಯುಸನ್ ಈ ಜೋಡಿಯನ್ನು ಬೇರ್ಪಡಿಸಿದರು.
5 ಎಸೆತಗಳನ್ನು ಎದುರಿಸಿದ ನಾಯಕ ಪಂತ್ 2 ರನ್ ಗಳಿಸಿ ಮ್ಯಾಕ್ಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಆಗ ಲಕ್ನೊ ತಂಡ 35 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಪೂರನ್ ಹಾಗೂ ಬದೋನಿ 4ನೇ ವಿಕೆಟ್‌ಗೆ 54 ರನ್ ಸೇರಿಸಿ ಇನಿಂಗ್ಸ್ ರಿಪೇರಿ ಮಾಡಿದರು.
ಡೇವಿಡ್ ಮಿಲ್ಲರ್(19 ರನ್, 18 ಎಸೆತ)ಜೊತೆಗೆ 30 ರನ್ ಜೊತೆಯಾಟ ನಡೆಸಿದ ಬದೋನಿ ಅವರು 6ನೇ ವಿಕೆಟ್‌ಗೆ ಸಮದ್ ಜೊತೆ 47 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕೊನೆಯ ಓವರ್‌ನಲ್ಲಿ ಬದೋನಿ ಹಾಗೂ ಸಮದ್ ವಿಕೆಟ್‌ಗಳನ್ನು ಉರುಳಿಸಿದ ಅರ್ಷದೀಪ್ ಲಕ್ನೊ ತಂಡಕ್ಕೆ ಕಡಿವಾಣ ಹಾಕಿದರು.
ಪಂಜಾಬ್ ಪರ ಅರ್ಷದೀಪ್ ಸಿಂಗ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮ್ಯಾಕ್ಸ್‌ವೆಲ್(1-22), ಫರ್ಗ್ಯುಸನ್(1-26), ಜಾನ್ಸನ್(1-28) ಹಾಗೂ ಯಜುವೇಂದ್ರ ಚಹಾಲ್(1-36) ತಲಾ ಒಂದು ವಿಕೆಟ್‌ಗಳನ್ನು ಪಡೆದರು.
ಆಡುವ 11ರ ಬಳಗಕ್ಕೆ ಅಯ್ಯರ್ ಅವರು ಅಫ್ಘಾನಿಸ್ತಾನದ ಆಲ್‌ರೌಂಡರ್ ಅಝ್ಮತುಲ್ಲಾ ಉಮರ್‌ಝೈ ಬದಲಿಗೆ ನ್ಯೂಝಿಲ್ಯಾಂಡ್‌ನ ವೇಗದ ಬೌಲರ್ ಲಾಕಿ ಫರ್ಗ್ಯುಸನ್‌ರನ್ನು ಸೇರಿಸಿಕೊಂಡರು. ಫರ್ಗ್ಯುಸನ್ ಪಂಜಾಬ್ ಕಿಂಗ್ಸ್ ಪರ ಇದೇ ಮೊದಲ ಬಾರಿ ಆಡುತ್ತಿದ್ದಾರೆ.
ರಿಷಭ್ ಪಂತ್ ಇದೇ ವೇಳೆ ಲಕ್ನೊ ತಂಡದ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಸಂಕ್ಷಿಪ್ತ ಸ್ಕೋರ್
ಲಕ್ನೊ ಸೂಪರ್ ಜಯಂಟ್ಸ್ : 20 ಓವರ್‌ಗಳಲ್ಲಿ 171/7
(ನಿಕೊಲಸ್ ಪೂರನ್ 44, ಆಯುಷ್ ಬದೋನಿ 41, ಅಬ್ದುಲ್ ಸಮದ್ 27, ಮರ್ಕ್ರಮ್ 28, ಅರ್ಷದೀಪ್ ಸಿಂಗ್ 3-43)
ಪಂಜಾಬ್ ಕಿಂಗ್ಸ್: 16.2 ಓವರ್‌ಗಳಲ್ಲಿ 177/2
(ಪ್ರಭ್‌ಸಿಮ್ರನ್ ಸಿಂಗ್ 69, ಶ್ರೇಯಸ್ ಅಯ್ಯರ್ ಔಟಾಗದೆ 52, ನೇಹಾಲ್ ವಧೇರ ಔಟಾಗದೆ 43, ದಿಗ್ವೇಶ್ ರಥಿ 2-30)