IPL 2025 | ಡೆಲ್ಲಿಯ ಅಜೇಯ ಓಟ ಮುಂದುವರಿಯುವುದೇ?

PC : PTI
ಚೆನ್ನೈ: ಶನಿವಾರ ಮಧ್ಯಾಹ್ನ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವೊಂದರಲ್ಲಿ, ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಮರುಸಂಘಟಿತ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಎದುರಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈವರೆಗೆ 3 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಸೋತರೆ, ಒಂದರಲ್ಲಿ ಜಯ ಗಳಿಸಿದೆ. ಅದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ತಾನಾಡಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ನೂರ್ ಅಹ್ಮದ್‌ರ ನಿರ್ವಹಣೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚೆನ್ನೈಯ ಒಣ ಹಾಗೂ ಸ್ಪಿನ್ ಸ್ನೇಹಿ ಪಿಚ್ ಉಭಯ ತಂಡಗಳಿಗೂ ಸಮಾನವ ಅವಕಾಶವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನ ಕುಲದೀಪ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನೊಂದೆಡೆ ಚೆನ್ನೈ ಪರವಾಗಿ ಆಡುತ್ತಿರುವ ಅಫ್ಘಾನಿಸ್ತಾನದ ನೂರ್ ಅಹ್ಮದ್ ಈಗಾಗಲೇ 6.83ರ ಸರಾಸರಿಯಲ್ಲಿ ಒಂಭತ್ತು ವಿಕೆಟ್‌ಗಳನ್ನು ಉರುಳಿಸಿ ಎದುರಾಳಿ ಬ್ಯಾಟರ್‌ಗಳಿಗೆ ಅತ್ಯಂತ ಅಪಾಯಕಾರಿಯಾಗಿ ಹೊರಹೊಮ್ಮಿದ್ದಾರೆ.
ವಿಶಾಖಪಟ್ಟಣಮ್‌ನ ಸಪಾಟು ಪಿಚ್‌ಗಳಲ್ಲಿ ಗುರಿಗಳನ್ನು ಯಶಸ್ವಿಯಾಗಿ ಬೆನ್ನತ್ತಿರುವ ಆತ್ಮವಿಶ್ವಾಸದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈಗೆ ಬರುತ್ತಿದೆ. ಕೆ.ಎಲ್. ರಾಹುಲ್, ಟ್ರೈಸ್ಟನ್ ಸ್ಟಬ್ಸ್ ಮತ್ತು ಜೇಕ್ ಫ್ರೇಸರ್-ಮೆಕ್‌ಗರ್ಕ್ ಮುಂತಾದವರು ತಂಡಕ್ಕೆ ವೇಗೋತ್ಕರ್ಷವನ್ನು ನೀಡುತ್ತಿದ್ದಾರೆ. ಹಾಗಾಗಿ, ಡೆಲ್ಲಿಯ ಮಧ್ಯಮ ಸರದಿಯು ಚೆನ್ನೈಗಿಂತ ಹೆಚ್ಚು ಬಲಿಷ್ಠವಾಗಿರುವಂತೆ ಕಂಡುಬರುತ್ತಿದೆ.
ಅದೇ ವೇಳೆ, ಇನಿಂಗ್ಸ್ ಕೊನೆಯಲ್ಲಿ ರನ್ ಗಳಿಕೆ ದರವನ್ನು ಹೆಚ್ಚಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರದಾಡುತ್ತಿದೆ. ಶಿವಮ್ ದುಬೆ ವಿಶ್ವಾಸಾರ್ಹ ಫಿನಿಶರ್ ಆದರೂ, ಒಂದು ಕಾಲದಲ್ಲಿ ಎದುರಾಳಿ ಬೌಲರ್‌ಗಳನ್ನು ನಡುಗಿಸಿದ್ದ ಎಮ್.ಎಸ್. ಧೋನಿ ಈಗ ಆ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ. ವೇಗದ ಬೌಲಿಂಗ್ ವಿರುದ್ಧ ರಾಹುಲ್ ತ್ರಿಪಾಠಿಯ ಕಳಪೆ ಫಾರ್ಮ್ ಮತ್ತು ಋತುರಾಜ್ ಗಾಯಕ್ವಾಡ್‌ರ ಅಚ್ಚರಿಯ ಹಿಂಭಡ್ತಿ ಚೆನ್ನೈಯ ಸಮಸ್ಯೆಗಳನ್ನು ಹೆಚ್ಚಿಸಿದೆ.
ಹಾಗಾಗಿ, ಚೆನ್ನೈ ತಂಡದ ಆಡಳಿತವು ಮುಂಬೈಯ ಹದಿಹರಯದ ಆಯುಶ್ ಮ್ಹಾತ್ರೆಯನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲಕ್ಕೆ ತಂದಿದೆ.
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಫಫ್ ಡು ಪ್ಲೆಸಿಸ್‌ರ ಅನುಭವವನ್ನು ಅವಲಂಬಿಸಿದೆ. ಚೆನ್ನೈ ಚೆಪಾಕ್ ಸ್ಟೇಡಿಯಮ್‌ನಲ್ಲಿನ ಅವರ ಅನುಭವವು ಕಿರಿಯ ಬ್ಯಾಟರ್‌ಗಳಿಗೆ ಉಪಯುಕ್ತವಾಗಲಿದೆ.
ಚೆಪಾಕ್ ಮೈದಾನದಲ್ಲಿ ಡೆಲ್ಲಿ ವಿರುದ್ಧ ಚೆನ್ನೈ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ಡೆಲ್ಲಿ ವಿರುದ್ಧ ನಡೆದ 9 ಪಂದ್ಯಗಳ ಪೈಕಿ ಚೆನ್ನೈ 7 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಡೆಲ್ಲಿ ವಿರುದ್ಧದ 30 ಪಂದ್ಯಗಳ ಪೈಕಿ ಚೆನ್ನೈ 19 ಪಂದ್ಯಗಳಲ್ಲಿ ಜಯ ಗಳಿಸಿದೆ.