ಐಪಿಎಲ್ ಗೆ ವಾಪಸಾಗಲು ಮಯಾಂಕ್ ಯಾದವ್ ಸಿದ್ಧ: ಜಸ್ಟಿನ್ ಲ್ಯಾಂಗರ್

ಮಯಾಂಕ್ ಯಾದವ್ | PC : PTI
ಲಕ್ನೊ: ಮಾಜಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಅದರದೇ ತವರು ಮೈದಾನದಲ್ಲಿ ಶುಕ್ರವಾರ 12 ರನ್‌ನಿಂದ ರೋಚಕ ಜಯ ಸಾಧಿಸಿದ ನಂತರ ಲಕ್ನೊ ಸೂಪರ್ ಜಯಂಟ್ಸ್ ಪಾಳಯದಲ್ಲಿ ಭಾರೀ ಸಂಭ್ರಮ ನೆಲೆಸಿದೆ. ಇದೀಗ ಲಕ್ನೊ ಪಾಲಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ವೇಗದ ಬೌಲರ್ ಮಯಾಂಕ್ ಯಾದವ್ 90ರಿಂದ 95 ಶೇ. ಬೌಲಿಂಗ್ ಮಾಡುತ್ತಿದ್ದು, ದೀರ್ಘ ಸಮಯದಿಂದ ನಿರೀಕ್ಷಿಸುತ್ತಿದ್ದ ಪುನರಾಗಮನಕ್ಕೆ ದಿನಗಣನೆ ಆರಂಭವಾಗಿದೆ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಖಚಿತಪಡಿಸಿದ್ದಾರೆ.
ಪಂದ್ಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲ್ಯಾಂಗರ್, ನನ್ನ ಪ್ರಕಾರ ಶಾರ್ದೂಲ್ ಠಾಕೂರ್ ಎಸೆದಿರುವ 19ನೇ ಓವರ್ ಅಮೋಘವಾಗಿತ್ತು. ಆ ಓವರ್ ನಮ್ಮನ್ನು ಪಂದ್ಯದಲ್ಲಿ ಸ್ಪರ್ಧೆಯಲ್ಲಿರಿಸಿತು. ಅ ನಂತರ ಅವೇಶ್ ಖಾನ್ ಕೆಲವು ಬಿಗಿ ಓವರ್‌ಗಳನ್ನು ಎಸೆದರು. ಅದ್ಭುತ ಕೊನೆಯ ಓವರ್ ನೊಂದಿಗೆ ತನ್ನದೇ ಶೈಲಿಯಲ್ಲಿ ಪಂದ್ಯ ಕೊನೆಗೊಳಿಸಿದ್ದರು ಎಂದರು.
ಮಯಾಂಕ್ ಯಾದವ್ ಕುರಿತು ಮಾಹಿತಿ ನೀಡಿದ ಲ್ಯಾಂಗರ್, ‘‘ಅವರು ಎನ್‌ಸಿಎಯಲ್ಲಿ ಕಠಿಣ ಪರಿಶ್ರಮಪಡುತ್ತಿದ್ದಾರೆ. ಅವರು ಬೌಲಿಂಗ್ ಮಾಡುತ್ತಿದ್ದ ಕೆಲವು ವೀಡಿಯೊಗಳನ್ನು ನಾನು ನೋಡಿದ್ದೇನೆ. ಅವರು 90ರಿಂದ 95 ಶೇ. ಬೌಲಿಂಗ್ ಮಾಡಿದ್ದಾರೆ. ಐಪಿಎಲ್ ನಲ್ಲಿ ಕಳೆದ ವರ್ಷ ಎಲ್ಲರ ಗಮನ ಸೆಳೆದಿದ್ದರು. ನನ್ನ ಪ್ರಕಾರ ಮಯಾಂಕ್ ಯಾದವ್ ಗಿಂತ ವೇಗವಾಗಿ ಬೌಲಿಂಗ್ ಮಾಡಬಲ್ಲ ಬೌಲರ್‌ಗಳು ಭಾರತ ತಂಡದಲ್ಲಿ ಇಲ್ಲ. ಹೀಗಾಗಿ ಅವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ’’ಎಂದರು.