ಇಂಗ್ಲೆಂಡ್‌ನ ಏಕದಿನ, ಟಿ-20 ತಂಡದ ನಾಯಕನಾಗಿ ಹ್ಯಾರಿ ಬ್ರೂಕ್ ನೇಮಕ

Update: 2025-04-07 19:20 IST
Harry Brook

 ಹ್ಯಾರಿ ಬ್ರೂಕ್‌ | PC : X \ @cricbuzz

  • whatsapp icon

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಏಕದಿನ ಹಾಗೂ ಟಿ-20 ತಂಡಗಳ ನೂತನ ನಾಯಕರನ್ನಾಗಿ ಹ್ಯಾರಿ ಬ್ರೂಕ್‌ರನ್ನು ನೇಮಿಸಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಸೋಮವಾರ ಪ್ರಕಟಿಸಿದೆ.

ಬ್ರೂಕ್ ಅವರು ಜೋಸ್ ಬಟ್ಲರ್ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಇಂಗ್ಲೆಂಡ್ ತಂಡವು ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದ ನಂತರ ಬಟ್ಲರ್ ನಾಯಕತ್ವ ತ್ಯಜಿಸಿದ್ದರು.

‘‘ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕನಾಗಿ ನೇಮಕಗೊಂಡಿರುವುದು ನಿಜವಾಗಿಯೂ ಗೌರವ. ನಾನು ವಾರ್ಫೆಡೇಲ್‌ ನ ಬರ್ಲಿಯಲ್ಲಿ ಬಾಲ್ಯದಲ್ಲಿ ಕ್ರಿಕೆಟ್ ಆಡುವಾಗ, ಯಾರ್ಕ್‌ಶೈರ್ ಅನ್ನು ಪ್ರತಿನಿಧಿಸುವ, ಇಂಗ್ಲೆಂಡ್ ಪರ ಆಡುವ ಹಾಗೂ ಮುಂದೊಂದು ದಿನ ತಂಡವನ್ನು ಮುನ್ನಡೆಸುವ ಕನಸು ಕಂಡಿದ್ದೆ’’ ಎಂದು 26ರ ಹರೆಯದ ಬ್ರೂಕ್ ಪ್ರತಿಕ್ರಿಯಿಸಿದರು.

2022ರ ಜನವರಿಯಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ನಂತರ ಬ್ರೂಕ್ ಅವರು ಇಂಗ್ಲೆಂಡ್ ಪರ 26 ಏಕದಿನ ಪಂದ್ಯಗಳನ್ನು ಆಡಿದ್ದು, 34ರ ಸರಾಸರಿಯಲ್ಲಿ ಒಟ್ಟು 816 ರನ್ ಗಳಿಸಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ 44 ಪಂದ್ಯಗಳನ್ನು ಆಡಿರುವ ಬ್ರೂಕ್, ಗರಿಷ್ಠ 81 ರನ್ ಗಳಿಸಿದ್ದರು. 2022ರಲ್ಲಿ ಐಸಿಸಿ ಟಿ-20 ವಿಶ್ವಕಪ್ ಗೆದ್ದಿರುವ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

ಸದ್ಯ ಟೆಸ್ಟ್ ಕ್ರಿಕೆಟ್‌ನ ಐಸಿಸಿ ವಲ್ಡ್ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಬ್ರೂಕ್ ಅವರು ಏಕದಿನ ಹಾಗೂ ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಉಪ ನಾಯಕನಾಗಿದ್ದರು.

ಬಟ್ಲರ್ ಅನುಪಸ್ಥಿತಿಯಲ್ಲಿ ಕಳೆದ ಸೆಪ್ಟಂಬರ್‌ ನಲ್ಲಿ ಆಸ್ಟ್ರೇಲಿಯದ ವಿರುದ್ಧ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನೇತೃತ್ವವಹಿಸಿದ್ದರು. ಯಂಗ್ ಲಯನ್ಸ್ ತಂಡದ ಮಾಜಿ ನಾಯಕನಾಗಿರುವ ಬ್ರೂಕ್ ಅವರು ನ್ಯೂಝಿಲ್ಯಾಂಡ್‌ನಲ್ಲಿ 2018ರಲ್ಲಿ ನಡೆದಿದ್ದ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ನಾಯಕತ್ವವಹಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News