IPL 2025 | ಜಸ್ಪ್ರೀತ್ ಬುಮ್ರಾ ಹಾಗೂ ಕರುಣ್ ನಾಯರ್ ನಡುವಿನ ಮಾತಿನ ಚಕಮಕಿ; ವಿಡಿಯೋ ವೈರಲ್

Screengrab:X/@StarSportsIndia
ಹೊಸದಿಲ್ಲಿ: ರವಿವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದಿಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಕರುಣ್ ನಾಯರ್ ರನ್‌ಗಾಗಿ ವಿಕೆಟ್‌ಗಳ ನಡುವೆ ಓಡುವಾಗ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಅವರಿಬ್ಬರ ನಡುವೆ ಮಾತಿನ ಚಕಮಕಿ ಘಟನೆ ನಡೆಯಿತು.
ದಿಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಕರುಣ್ ನಾಯರ್ ಕೇವಲ 40 ಬಾಲ್‌ಗಳಲ್ಲಿ ಆಕರ್ಷಕ 89 ರನ್ ಗಳಿಸಿದ್ದಾಗ ಈ ಘಟನೆ ನಡೆಯಿತು. ಈ ಮೊತ್ತದಲ್ಲಿ ಅವರು ಕೇವಲ 22 ಬಾಲ್‌ಗಳಲ್ಲಿ ಸಿಡಿಸಿದ ಅರ್ಧಶತಕವೂ ಸೇರಿತ್ತು.
ಜಸ್ಪ್ರೀತ್ ಬುಮ್ರಾ ಎಸೆದ ಓವರ್ ವೇಳೆ ರನ್‌ಗಾಗಿ ಓಡುವಾಗ ಕರುಣ್ ನಾಯರ್ ಬುಮ್ರಾ ಅವರಿಗೆ ಢಿಕ್ಕಿ ಹೊಡೆದರು. ಇದರಿಂದ ಕುಪಿತಗೊಂಡಂತೆ ಕಂಡು ಬಂದ ಜಸ್ಪ್ರೀತ್ ಬುಮ್ರಾ, ಅವರೊಂದಿಗೆ ಮಾತಿನ ಚಕಮಕಿಗೆ ಇಳಿದರು. ನಂತರ, ಮಧ್ಯಪ್ರವೇಶಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಇಬ್ಬರನ್ನೂ ಸಮಾಧಾನಗೊಳಿಸಿದರು. ಈ ವೇಳೆ ಈ ಘಟನೆಯ ವೇಳೆ ಮೈದಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ಅಟಗಾರ ರೋಹಿತ್ ಶರ್ಮ ನೀಡಿದ ತಮಾಷೆಯ ಪ್ರತಿಕ್ರಿಯೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತು. ರೋಹಿತ್ ಶರ್ಮರ ಈ ತಮಾಷೆಯ ವರ್ತನೆ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ.
ಇದಕ್ಕೂ ಮುನ್ನ, ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ತಿಲಕ್ ವರ್ಮ (59), ರಯಾನ್ ರಿಕೆಲ್ಟನ್ (41), ಸೂರ್ಯಕುಮಾರ್ ಯಾದವ್ (40) ಹಾಗೂ ನಮನ್ ಧೀರ್ (38) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ದಿಲ್ಲಿ ಕ್ಯಾಪಿಟಲ್ಸ್ ತಂಡ, ಕರುಣ್ ನಾಯರ್ ಅವರ ಆಕ್ರಮಣಕಾರಿ 89 ರನ್‌ಗಳ ಹೊರತಾಗಿಯೂ 19 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 193 ರನ್ ಗಳಿಸಲಷ್ಟೆ ಶಕ್ತವಾಯಿತು. ಹೀಗಾಗಿ, ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಗೆಲುವಿನ ನಗೆ ಬೀರಿತು.