ಹಸಿರು ಜೆರ್ಸಿ ಧರಿಸಿ ಆಡಿದ ಆರ್‌ಸಿಬಿ ಆಟಗಾರರು

PC : NDTV
ಜೈಪುರ: ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡವು ಹಸಿರು ಜೆರ್ಸಿಯೊಂದಿಗೆ ಮೈದಾನಕ್ಕಿಳಿದು ಪರಿಸರ ಸುಸ್ಥಿರತೆಗೆ ತನ್ನ ಬದ್ದತೆಯನ್ನು ವ್ಯಕ್ತಪಡಿಸಿದೆ.
ಈ ವಿಶೇಷ ಆವೃತ್ತಿಯ ಜೆರ್ಸಿಯು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಮರಗಳನ್ನು ನೆಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರ್‌ಸಿಬಿ ಪ್ರತೀ ವರ್ಷ ನಡೆಸುತ್ತಿರುವ ‘ಗ್ರೋ ಗ್ರೀನ್' ಅಭಿಯಾನದ ಭಾಗವಾಗಿದೆ.
ಟಾಸ್ ಗೆದ್ದ ನಂತರ ಬೌಲಿಂಗ್ ಆಯ್ದುಕೊಂಡಿರುವ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಗ್ರೀನ್ ಕಿಟ್ ಹಿಂದಿನ ಕಾರಣವನ್ನು ತಿಳಿಸಿದರು.
‘‘ನಾವು ಮೊದಲು ಬೌಲಿಂಗ್ ಮಾಡಲು ಬಯಸಿದ್ದು, ಪಿಚ್ ಉತ್ತಮವಾಗಿ ಕಾಣುತ್ತಿದೆ. ಪಿಚ್ ಹೇಗೆ ವರ್ತಿಸುತ್ತದೆ ಎಂದು ನಮಗೆ ಗೊತ್ತಿದೆ. ಹಸಿರು ಜೆರ್ಸಿ ಹೆಚ್ಚು ಮರಗಳನ್ನು ನೆಡಲು ಜಾಗೃತಿ ಮೂಡಿಸುತ್ತದೆ’’ ಎಂದು ಪಾಟಿದಾರ್ ಹೇಳಿದ್ದಾರೆ.
ಆರ್‌ಸಿಬಿಯ ಹಸಿರು ಜೆರ್ಸಿಯನ್ನು ಪುಮಾದ ರೀ-ಫೈಬರ್ ಬಟ್ಟೆಯಿಂದ ತಯಾರಿಸಲಾಗಿದೆ. ಇದನ್ನು ಜವಳಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಪಡೆದಿರುವ ಶೇ.25 ಮರು ಬಳಕೆಯ ಪಾಲಿಯೆಸ್ಟರ್‌ನಿಂದ ತಯಾರಿಸಲಾಗಿದೆ. ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಹಲವು ಬಾರಿ ಮರು ಬಳಕೆ ಮಾಡಲು ಕಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ.