ಮುಂಬೈ ಇಂಡಿಯನ್ಸ್ ಗೆ ಜಸ್‌ಪ್ರಿತ್ ಬುಮ್ರಾ ಸೇರ್ಪಡೆ

ಜಸ್‌ಪ್ರಿತ್ ಬುಮ್ರಾ | PC : NDTV
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಬಳಗದಲ್ಲಿ ಕಾತರದ ಅಲೆಗಳನ್ನು ಸೃಷ್ಟಿಸಿರುವ ಪ್ರಮುಖ ಬೆಳವಣಿಗೆಯೊಂದರಲ್ಲಿ ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಮುಂಬರುವ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯಗಿಂತ ಮೊದಲು ಫ್ರಾಂಚೈಸಿಯ ತಂಡವನ್ನು ಶನಿವಾರ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಯಿಂದ ಅನುಮತಿ ಪಡೆದ ನಂತರ ಬುಮ್ರಾ ಅವರು ಮುಂಬೈ ತಂಡವನ್ನು ಸೇರ್ಪಡೆಯಾದರು. ರವಿವಾರ ವಾಂಖೆಡೆ ಸ್ಟೇಡಿಯಮ್ ನಲ್ಲಿ ಅಭ್ಯಾಸ ನಡೆಸಿದರು.
‘‘ಬುಮ್ರಾ ಅವರು ಸೋಮವಾರ ಮುಂಬೈ ಇಂಡಿಯನ್ಸ್ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ’’ಎಂದು ಪ್ರಧಾನ ಕೋಚ್ ಮಹೇಲ ಜಯವರ್ಧನೆ ಖಚಿತಪಡಿಸಿದರು.
‘‘ಬುಮ್ರಾ ಲಭ್ಯವಿರಲಿದ್ದು, ಇಂದು ಅಭ್ಯಾಸ ನಡೆಸಿದ್ದಾರೆ. ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಅವರು ಲಭ್ಯವಿರಲಿದ್ದಾರೆ’’ ಎಂದು ಜಯವರ್ಧನೆ ರವಿವಾರ ಹೇಳಿದ್ದಾರೆ.
ಐದು ಬಾರಿಯ ಚಾಂಪಿಯನ್ಸ್ ಮುಂಬೈ ತಂಡವು ರವಿವಾರ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದು, ‘ರೆಡಿ ಟು ರೋರ್’ ಎಂಬ ಅಡಿಬರಹದೊಂದಿಗೆ ವೀಡಿಯೊವನ್ನು ಹಂಚಿಕೊಂಡಿದೆ.
ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ನಂತರ ಬುಮ್ರಾ ಅವರ ಬಹುನಿರೀಕ್ಷಿತ ಪುನರಾಗಮನವಾಗಿದೆ. ಈ ವರ್ಷ ಮುಂಬೈ ಇಂಡಿಯನ್ಸ್ ತಂಡ ಈ ತನಕ ಆಡಿರುವ ಯಾವ ಪಂದ್ಯದಲ್ಲೂ ವೇಗದ ಬೌಲರ್ ಬುಮ್ರಾ ಭಾಗವಹಿಸಿಲ್ಲ. ಹೀಗಾಗಿ ಅವರ ಪುನರಾಗಮನವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
2013ರಲ್ಲಿ ಐಪಿಎಲ್ ಗೆ ಪಾದಾರ್ಪಣೆಗೈದ ನಂತರ ಮುಂಬೈ ಪರವೇ ಎಲ್ಲ ಐಪಿಎಲ್ ಕ್ರಿಕೆಟ್ ಆಡಿದ್ದಾರೆ. 133 ಪಂದ್ಯಗಳನ್ನು ಆಡಿರುವ ಬುಮ್ರಾ ಅವರು 165 ವಿಕೆಟ್‌ಗಳನ್ನು ಉರುಳಿಸಿದ್ದರು. ಬೆನ್ನುನೋವಿನ ಕಾರಣಕ್ಕೆ 2023ರಲ್ಲಿ ಆಡಿರಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ನಂತರ ಎರಡನೇ ಗರಿಷ್ಠ ವಿಕೆಟ್ ಸರದಾರನಾಗಿದ್ದಾರೆ.
ಸಿಡ್ನಿಯಲ್ಲಿ ಜನವರಿ 4ರಂದು ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್‌ನ 2ನೇ ದಿನದಾಟದಲ್ಲಿ ಬುಮ್ರಾ ಗಾಯಗೊಂಡಿದ್ದರು. ಪರಿಣಾಮವಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದರು. ಮೆಗಾ ಹರಾಜಿಗಿಂತ ಮೊದಲು ಮುಂಬೈ ತಂಡವು ಬುಮ್ರಾರನ್ನು 18 ಕೋಟಿ ರೂ.ಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಈ ಮೂಲಕ ವೇಗಿಯ ಮೇಲೆ ಬಲವಾದ ನಂಬಿಕೆ ಇರಿಸಿತ್ತು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿರುವ ಮುಂಬೈ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಶುಕ್ರವಾರ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಕ್ಕಿಂತ ಮೊದಲು ಟಾಸ್ ವೇಳೆ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬುಮ್ರಾ ಪುನರಾಗಮನದ ಕುರಿತಂತೆ ಸುಳಿವು ನೀಡಿದ್ದರು. ‘‘ಜಸ್‌ಪ್ರಿತ್ ಶೀಘ್ರವೇ ತಂಡಕ್ಕೆ ಮರಳಲಿದ್ದಾರೆ’’ ಎಂದಿದ್ದರು. ಪಾಂಡ್ಯ ಅವರ ಭರವಸೆಯ ಮಾತು ನಿಜವಾಗಿದೆ.
ಬುಮ್ರಾ ಅವರು ಪುನರಾಗಮನದಿಂದ ಮುಂಬೈ ಇಂಡಿಯನ್ಸ್ ಭಾರೀ ನಿಟ್ಟುಸಿರು ಬಿಟ್ಟಿದೆ. ಮುಂಬೈ ತಂಡವು ಈ ವರ್ಷದ ಐಪಿಎಲ್ ನಲ್ಲಿ ಗೆಲುವಿಗಾಗಿ ಪರದಾಡುತ್ತಿದೆ. ಬುಮ್ರಾ ಅವರ ಉಪಸ್ಥಿತಿಯು ಬೌಲಿಂಗ್ ದಾಳಿಯನ್ನು ಬಲಿಷ್ಠವಾಗಿಸುವುದಲ್ಲದೆ, ಕಠಿಣ ಪರಿಸ್ಥಿತಿಗಳಲ್ಲಿ ನಾಯಕತ್ವವನ್ನು ಒದಗಿಸಲಿದೆ.
ಮುಂಬೈ ಇಂಡಿಯನ್ಸ್ ತಂಡವು ಈ ಋತುವಿನಲ್ಲಿ ಇನ್ನಷ್ಟೇ ಯಶಸ್ಸಿನ ಶಿಖರ ಏರಬೇಕಾಗಿದೆ. ಬುಮ್ರಾ ಅವರ ಆಗಮನವು ಟರ್ನಿಂಗ್ ಪಾಯಿಂಟ್ ಆಗಬಹುದು. ತನ್ನ ಉತ್ತಮ ಯಾರ್ಕರ್ ಗಳಿಗೆ ಹೆಸರುವಾಸಿಯಾಗಿರುವ ಬುಮ್ರಾ ಅವರು ಒತ್ತಡದಲ್ಲೂ ಶಾಂತವಾಗಿರುತ್ತಾರೆ ಹಾಗೂ ಪಂದ್ಯದ ದಿಕ್ಕನ್ನು ಬದಲಿಸುವ ಸ್ಪೆಲ್ ಎಸೆಯಬಲ್ಲರು. ಮುಂಬೈ ತಂಡವು ಅಂಕಪಟ್ಟಿಯಲ್ಲಿ ಭಡ್ತಿ ಪಡೆಯುವಲ್ಲಿ 31ರ ಹರೆಯದ ವೇಗದ ಬೌಲರ್ ನಿರ್ಣಾಯಕವಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಸವಾಲು ಎದುರಿಸಲಿದೆ.