IPL 2025 | 39 ಎಸೆತಗಳಲ್ಲಿ ಶತಕ ಗಳಿಸಿದ ಯುವ ಆಟಗಾರ ಪ್ರಿಯಾಂಶ್ ಆರ್ಯಾ ಬಗ್ಗೆ ಇಲ್ಲಿದೆ ಮಾಹಿತಿ...

PC | x.com/OneCricketApp
ಹೊಸದಿಲ್ಲಿ: ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರ ಮಂಗಳವಾರ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. 9 ಸಿಕ್ಸ್ ಮತ್ತು ಏಳು ಬೌಂಡರಿ ಸಿಡಿಸಿ ನೂರ್ ಅಹ್ಮದ್‍ಗೆ ವಿಕೆಟ್ ಒಪ್ಪಿಸುವ ಮುನ್ನ 103 ರನ್ ಗಳಿಸಿದ ಯುವ ಆಟಗಾರ ಪೆವಿಲಿಯನ್‍ಗೆ ವಾಪಸ್ಸಾಗುವ ವೇಳೆ ಸಹ ಆಟಗಾರರು ಹಾಗೂ ತಂಡದ ಒಡತಿ ಪ್ರೀತಿ ಝಿಂಟಾ ಎದ್ದುನಿಂತು ಗೌರವ ಸೂಚಿಸಿದರು.
ಮೊದಲ ಪಂದ್ಯದಲ್ಲಿ ಹೊಡಿಬಡಿಯ 47 ರನ್ ಗಳಿಸಿದ್ದ ಆರ್ಯಾ ತಮ್ಮ ನಾಲ್ಕನೇ ಪಂದ್ಯದಲ್ಲಿ ವೇಗದ ಶತಕ ಗಳಿಸಿದರು. ಶತಕ ಪೂರೈಸಿದ 13ನೇ ಓವರ್ ನಲ್ಲಿ ಬೌಲರ್ ಮತೀಶಾ ಪತಿರಣ ದಂಡನೆಗೆ ಒಳಗಾಗಿ 22 ರನ್‍ಗಳನ್ನು ಬಿಟ್ಟುಕೊಟ್ಟರು.
ದಿಲ್ಲಿ ತಂಡದ ಆಕ್ರಮಣಕಾರಿ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯಾ ಅವರನ್ನು ಪಂಜಾಬ್ ಕಿಂಗ್ಸ್ 3.8 ಕೋಟಿ ರೂಪಾಯಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ದಿಲ್ಲಿ ಪ್ರಿಮಿಯರ್ ಲೀಗ್‍ನಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡದ ಪರ 10 ಇನ್ನಿಂಗ್ಸ್ ಗಳಲ್ಲಿ 608 ರನ್‍ಗಳನ್ನು ಸಿಡಿಸಿದ ದಾಖಲೆ ಇವರದ್ದು. ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ ಓವರ್ ನ ಎಲ್ಲ ಎಸೆತಗಳಿಗೆ ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು.
2023-24ರ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ದಿಲ್ಲಿ ಪರ 7 ಇನ್ನಿಂಗ್ಸ್ ಗಳಲ್ಲಿ 31.71 ಸರಾಸರಿಯಲ್ಲಿ 166.91 ಸ್ಟ್ರೈಕ್‍ರೇಟ್‍ನಲ್ಲಿ 222 ರನ್ ಕಲೆ ಹಾಕಿದ್ದರು. 2024ರ ಐಪಿಎಲ್‍ಗೆ ಶಾರ್ಟ್‍ಲಿಸ್ಟ್ ಆಗಿದ್ದರೂ, ಯಾರೂ ಇವರನ್ನು ಖರೀದಿಸಿರಲಿಲ್ಲ.