ಮುಂಬೈ ಇಂಡಿಯನ್ಸ್ ಗೆ ನಾಲ್ಕನೇ ಸೋಲು; ಭಾವುಕರಾದ ಹಾರ್ದಿಕ್ ಪಾಂಡ್ಯಗೆ ಸಹೋದರ ಕೃನಾಲ್ ರಿಂದ ಸಾಂತ್ವನ

ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ | PC : X
ಹೊಸದಿಲ್ಲಿ: ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ಆರ್‌ಸಿಬಿ ವಿರುದ್ಧ ಶರಣಾಗುವ ಮೂಲಕ 2025ರ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು 4ನೇ ಸೋಲು ಕಂಡಿದೆ. ಆರ್‌ಸಿಬಿ 10 ವರ್ಷಗಳ ನಂತರ ಮೊದಲ ಬಾರಿ ವಾಂಖೆಡೆಯಲ್ಲಿ ಜಯ ದಾಖಲಿಸಿದೆ.
ಮುಂಬೈ ತಂಡವು ತವರು ಮೈದಾನದಲ್ಲಿ ಕೇವಲ 12 ರನ್ ಅಂತರದಿಂದ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ನಂತರ
ನಾಯಕ ಹಾರ್ದಿಕ್ ಪಾಂಡ್ಯ ಭಾವುಕರಾದರು. ಹಾರ್ದಿಕ್‌ರ ಸಹೋದರ ಹಾಗೂ ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರು ಪಂದ್ಯ ನಂತರ ದುಃಖಿಸುತ್ತಿದ್ದ ಸಹೋದರನನ್ನು ಬಿಗಿದಪ್ಪಿ ಸಮಾಧಾನಪಡಿಸಿದರು. ಆ ನಂತರ ಸಹೋದರರು ಮೈದಾನದಲ್ಲಿ ಸಂವಹನ ನಡೆಸುತ್ತಿರುವುದು ಕಂಡು ಬಂತು.
‘‘ನಮ್ಮಲ್ಲಿ ಒಬ್ಬರೇ ಗೆಲ್ಲುತ್ತಾರೆಂದು ಗೊತ್ತಿತ್ತು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ ಹಾಗೂ ವಾತ್ಸಲ್ಯ ತುಂಬಾ ಸಹಜ. ನಾವಿಬ್ಬರೂ ಪಂದ್ಯವನ್ನು ಗೆಲ್ಲಲು ಬಯಸಿದ್ದೆವು. ನನಗೆ ಸಹೋದರನ ಮೇಲೆ ಅನುಕಂಪ ಇದೆ’’ ಎಂದು ಪಂದ್ಯದ ನಂತರ ಕೃನಾಲ್ ಹೇಳಿದ್ದಾರೆ.
ಕೃನಾಲ್ ಪಾಂಡ್ಯ ಆರ್‌ಸಿಬಿ ಪರ ಕೊನೆಯ ಓವರ್ ಎಸೆದರು. ಅಂತಿಮ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಹಾಗೂ ದೀಪಕ್ ಚಹಾರ್ ವಿಕೆಟನ್ನು ಉರುಳಿಸಿದ ಪಾಂಡ್ಯ ಉಳಿದ ಎಸೆತಗಳನ್ನು ಬಿಗಿಯಾದ ಲೈನ್ ಹಾಗೂ ಲೆಂಗ್ತ್‌ನಲ್ಲಿ ಎಸೆದರು.
ಕೊನೆಯ ಓವರ್‌ನ ಆರಂಭದಲ್ಲಿ ಹಾರ್ದಿಕ್ ಮುಖದಲ್ಲಿ ನಗುವಿತ್ತು. ಆದರೆ ಪಂದ್ಯವು ಆರ್‌ಸಿಬಿಯತ್ತ ವಾಲಿದಾಗ ಅವರ ಮುಖ ಬಾಡಿತು.
ಈ ಪಂದ್ಯದಲ್ಲಿ ಪಾಂಡ್ಯ ಸಹೋದರರು ಅತ್ಯುತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್ 15 ಎಸೆತಗಳಲ್ಲಿ 42 ರನ್ ಗಳಿಸಿದ್ದಲ್ಲದೆ, 2 ವಿಕೆಟ್ ಪಡೆದಿದ್ದರು. ಕೃನಾಲ್ ಅವರು ಮುಂಬೈ ತಂಡ ರನ್ ಚೇಸ್ ವೇಳೆ 4 ವಿಕೆಟ್‌ಗಳನ್ನು ಉರುಳಿಸಿ ಮುಂಬೈ ಬೆನ್ನುಮೂಳೆ ಮುರಿದರು. ಮುಂಬೈ ತಂಡವು ಸತತ ಎರಡನೇ ಬಾರಿ 12 ರನ್ ಅಂತರದಿಂದ ಸೋಲುಂಡಿದೆ.