ಎಪ್ರಿಲ್ 27ರಂದು ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್

PC : apd_india \ instagram.com
ಬೆಂಗಳೂರು: ಈ ಬಾರಿಯ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಬೆಂಗಳೂರಿನಲ್ಲಿ ಎಪ್ರಿಲ್ 27ರಂದು ನಡೆಯಲಿದೆ.
ಉಗಾಂಡದ ಒಲಿಂಪಿಕ್ಸ್ ಸ್ಪರ್ಧಿ ಜೋಶುವ ಚೆಪ್ಟೇಗಿ ಹಾಗೂ ಕೆನ್ಯದ ಭರವಸೆಯ ಓಟಗಾರ್ತಿಯರಾದ ಸಿಂತಿಯಾ ಚೆಪಂಗೆನೊ ಮತ್ತು ಗ್ಲಾಡಿಸ್ ಕ್ವಂಬೊಕ ಮೊಂಗಾರೆ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ, 2014ರ ಬಳಿಕ ಮರಳಿರುವ ಚೆಪ್ಟೇಗಿಗೆ ಅವರದೇ ದೇಶದ, 2020ರ ಡೆಲ್ಲಿ ಹಾಫ್ ಮ್ಯಾರಥಾನ್ ನಲ್ಲಿ ಕಂಚು ಗೆದ್ದಿರುವ ಸ್ಟೀಫನ್ ಕಿಸ್ಸ ಸ್ಪರ್ಧೆ ನೀಡಲಿದ್ದಾರೆ. ಈ ವರ್ಷದ ಆದಿ ಭಾಗದಲ್ಲಿ ವೆಲೆನ್ಶಿಯದಲ್ಲಿ ನಡೆದ ಸ್ಪರ್ಧೆಯಲ್ಲಿ 26 ನಿಮಿಷ 55 ಸೆಕೆಂಡ್‌ನಲ್ಲಿ ಸ್ಪರ್ಧೆ ಮುಗಿಸಿರುವ ಕೆನ್ಯದ ವಿನ್ಸೆಂಟ್ ಲಂಗಟ್ ಕೂಡ ತೀವ್ರ ಸ್ಪರ್ಧೆ ನೀಡಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಸಿಂತಿಯಾ ಚೆಪಂಗೆನೊ ಮತ್ತು ಗ್ಲಾಡಿಸ್ ಕ್ವಂಬೊಕ ಮೊಂಗಾರೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿದ್ದಾರೆ. ಅವರಿಗೆ ತೀವ್ರ ಸ್ಪರ್ಧೆ ನೀಡಲು ಆಫ್ರಿಕಾದ ಮೂರು ದೇಶಗಳ ದೂರ ಅಂತರದ ಓಟಗಾರ್ತಿಯರು ಸಜ್ಜಾಗಿದ್ದಾರೆ. ಅವರೆಂದರೆ- ಯೂಜಿನ್ ನಲ್ಲಿ ನಡೆದ 2022 ವಿಶ್ವ ಚಾಂಪಿಯನ್ ಶಿಪ್ಸ್ ನಲ್ಲಿ ಐದನೇ ಸ್ಥಾನ ಗಳಿಸಿರುವ ಎರಿಟ್ರಿಯದ ರಹೇಲ್ ಡೇನಿಯಲ್, 2023ರ ಆಫ್ರಿಕನ್ ಜೂನಿಯರ್ ಚಾಂಪಿಯನ್ ಇಥಿಯೋಪಿಯದ ಅಸ್ಮಾರೆಚ್ ಆನ್ಲಿ ಮತ್ತು ಉಗಾಂಡದ ಸಾರಾ ಚೆಲಂಗಟ್.
ಚೆಲಂಗಟ್ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10,000 ಮೀಟರ್ ಓಟದ ಫೈನಲ್‌ನಲ್ಲಿ ಓಡಿದ್ದರು.