ಶೂಟಿಂಗ್ ವಿಶ್ವಕಪ್: ಸ್ವರ್ಣ ಗೆದ್ದ ರೈಫಲ್ ಶೂಟರ್ ರುದ್ರಾಂಕ್ಷ್ ಪಾಟೀಲ್

ರುದ್ರಾಂಕ್ಷ್ ಪಾಟೀಲ್ | PC : @KhelNow
ಹೊಸದಿಲ್ಲಿ: ವರ್ಷದ ಹಿಂದೆ 2024ರ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿ ಭಾರೀ ನಿರಾಶೆ ಅನುಭವಿಸಿದ್ದ ಮಾಜಿ ವಿಶ್ವ ಚಾಂಪಿಯನ್ ರೈಫಲ್ ಶೂಟರ್ ರುದ್ರಾಂಕ್ಷ್ ಪಾಟೀಲ್ ಬ್ಯುನಸ್ ಐರಿಸ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ರವಿವಾರ ನಡೆದ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ ಪಾಟೀಲ್ 252.9 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಪ್ಯಾರಿಸ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಅರ್ಜುನ್ ಬಬುಟಾ ಕೂಡ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಅವರು 144.9 ಅಂಕ ಗಳಿಸಿ 7ನೇ ಸ್ಥಾನ ಪಡೆದು ಪದಕ ಸುತ್ತಿಗೇರದೆ ನಿರ್ಗಮಿಸಿದರು.
21ರ ಹರೆಯದ ಮಹಾರಾಷ್ಟ್ರದ ಶೂಟರ್ ಪಾಟೀಲ್ ಪ್ಯಾರಿಸ್ ಗೇಮ್ಸ್ ಗೆ ಕೋಟಾ ಸ್ಥಾನ ಗಿಟ್ಟಿಸಿಕೊಂಡಿದ್ದರು. ಟ್ರಯಲ್ಸ್ ನಲ್ಲಿ ಸಂದೀಪ್ ಸಿಂಗ್‌ಗೆ ಸೋತ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರಿಂದ ವಂಚಿತರಾಗಿದ್ದರು. ಈ ಹಿನ್ನಡೆಯ ನಂತರ ಪಾಟೀಲ್ ಮಾನಸಿಕವಾಗಿ ಕುಗ್ಗಿದ್ದರು. ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು.