93 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿದ ಬುಮ್ರಾ

ಜಸ್ ಪ್ರಿತ್ ಬುಮ್ರಾ | PC : PTI
ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಮ್‌ನಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ ಪ್ರಿತ್ ಬುಮ್ರಾರನ್ನು ಸೇರಿಸಿಕೊಳ್ಳಲಾಗಿದೆ.
ಮೂರು ತಿಂಗಳಿಗೂ ಹೆಚ್ಚಿನ ಸಮಯದಿಂದ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಅವರು ಕೊನೆಯದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದು ಸಿಡ್ನಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ.
ಗಾಯದಿಂದ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಬುಮ್ರಾ ತಂಡಕ್ಕೆ ಬರುವುದನ್ನು ಮುಂಬೈ ಇಂಡಿಯನ್ಸ್ ಪ್ರಧಾನ ಕೋಚ್ ಮಹೇಲ ಜಯವರ್ಧನೆ ಖಚಿತಪಡಿಸಿದ್ದರು. ಬುಮ್ರಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನಿಂದ ಅನುಮೋದನೆ ಪಡೆದ ಬಳಿಕ, ಶನಿವಾರ ಮುಂಬೈ ಇಂಡಿಯನ್ಸ್ ಶಿಬಿರಕ್ಕೆ ಸೇರ್ಪಡೆಗೊಂಡಿದ್ದರು.
ಸೋಮವಾರದ ಪಂದ್ಯಕ್ಕೆ ಮೊದಲು, ಎರಡು ಜಯ ಮತ್ತು ಒಂದು ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಒಂದು ಜಯ ಮತ್ತು ಮೂರು ಸೋಲುಗಳೊಂದಿಗೆ ಮುಂಬೈ ಇಂಡಿಯನ್ಸ್ 8ನೇ ಸ್ಥಾನದಲ್ಲಿದೆ.
ತಂಡದ ಬಸವಳಿದಿರುವ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವ ಕ್ರಮವಾಗಿ ಬುಮ್ರಾರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
2013ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದಂದಿನಿಂದ ಬುಮ್ರಾ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರರಾಗಿದ್ದಾರೆ. ಅವರು 133 ಪಂದ್ಯಗಳಿಂದ 165 ವಿಕೆಟ್ ಗಳನ್ನು ಪಡೆದಿದ್ದಾರೆ. ಅವರು 2023ರ ಐಪಿಎಲ್ ಋತುವಿನಿಂದ ಹೊರಗಿದ್ದರು. ಆ ವರ್ಷದ ಮಾರ್ಚ್‌ನಲ್ಲಿ ಅವರು ಬೆನ್ನು ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಹಿಂದಿನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯ ತಳದಲ್ಲಿ ಸ್ಥಾನ ಪಡೆಯಿತಾದರೂ, ಬುಮ್ರಾ ಪಂದ್ಯಾವಳಿಯ ಮೂರನೇ ಗರಿಷ್ಠ ವಿಕೆಟ್ ಗಳಿಕೆದಾರರರಾದರು. ಅವರು 16.80 ಸರಾಸರಿಯಲ್ಲಿ 13 ಪಂದ್ಯಗಳಿಂದ 20 ವಿಕೆಟ್‌ಗಳನ್ನು ಪಡೆದಿದ್ದರು.