2 ವರ್ಷ ಐಸಿಸಿ ನಿಷೇಧದ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ನಾಸಿರ್ ಹುಸೇನ್ ವಾಪಸ್
ಢಾಕಾ: 2020-21ರ ಆವೃತ್ತಿಯ ಅಬುಧಾಬಿ ಟಿ-10 ಲೀಗ್‌ನ ವೇಳೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ(ಐಸಿಸಿ)ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾದ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ಬಾಂಗ್ಲಾದೇಶದ ಆಲ್ ರೌಂಡರ್ ನಾಸಿರ್ ಹುಸೇನ್ ವಾಪಸಾಗಿದ್ದಾರೆ.
ಮೀರ್ಪುರದ ಶೇರ್-ಇ-ಬಾಂಗ್ಲಾ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಗಾಝಿ ಗ್ರೂಪ್ ಕ್ರಿಕೆಟರ್ಸ್ ವಿರುದ್ಧ ರೂಪ್ ಗಂಜ್ ಟೈಗರ್ಸ್ ಕ್ರಿಕೆಟ್ ಕ್ಲಬ್ ಪರ ಢಾಕಾ ಪ್ರೀಮಿಯರ್ ಡಿವಿಜನ್ ಲೀಗ್ ಪಂದ್ಯದ ವೇಳೆ ಹುಸೇನ್ ಸಕ್ರಿಯ ಕ್ರಿಕೆಟಿಗೆ ವಾಪಸಾಗಲಿದ್ದಾರೆ.
‘‘ಅನುಮೋದನೆಯ ನಿಯಮಗಳ ಪ್ರಕಾರ, ನಾಸಿರ್ ಹುಸೇನ್ ಈಗ ಕಡ್ಡಾಯ ಭ್ರಷ್ಟಾಚಾರ ವಿರೋಧಿ ಶಿಕ್ಷಣ ಸೆಶನ್ ಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಎಲ್ಲ ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಇದು 2025ರ ಎಪ್ರಿಲ್ 7ರಂದು ಅಧಿಕೃತವಾಗಿ ಕ್ರಿಕೆಟಿಗೆ ಮರು ಪ್ರವೇಶಿಸಲು ಅವರ ಅರ್ಹತೆಗೆ ದಾರಿ ಮಾಡಿಕೊಟ್ಟಿದೆ’’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ತಿಳಿಸಿದೆ.
2023ರ ಸೆಪ್ಟಂಬರ್‌ನಲ್ಲಿ ನಿಷೇಧಕ್ಕೆ ಒಳಗಾಗಿರುವ ಹುಸೇನ್ 2011 ಹಾಗೂ 2018ರ ನಡುವೆ ಬಾಂಗ್ಲಾದೇಶವನ್ನು 19 ಟೆಸ್ಟ್, 65 ಏಕದಿನ ಹಾಗೂ 31 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.