ದಾಖಲೆ ಬೆಲೆಗೆ ಹರಾಜಾಗಿದ್ದು ಪಂತ್ ಪ್ರದರ್ಶನದ ಮೇಲೆ ಪ್ರಭಾವಬೀರಿದೆಯೇ ?

Update: 2025-04-03 23:25 IST
ದಾಖಲೆ ಬೆಲೆಗೆ ಹರಾಜಾಗಿದ್ದು ಪಂತ್ ಪ್ರದರ್ಶನದ ಮೇಲೆ ಪ್ರಭಾವಬೀರಿದೆಯೇ ?

ರಿಷಭ್ ಪಂತ್ | PC : PTI

  • whatsapp icon

ಹೊಸದಿಲ್ಲಿ, ಎ.3: ಭಾರತದ ಡೈನಾಮಿಕ್ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಠಿಣ ಸಮಯ ಎದುರಿಸುತ್ತಿದ್ದಾರೆ. ಮಾರಣಾಂತಿಕ ಕಾರು ಅಪಘಾತದಿಂದ ಚೇತರಿಸಿಕೊಂಡ ನಂತರ ಪಂತ್ ಐಪಿಎಲ್-2024ರಲ್ಲಿ ಗಮನಾರ್ಹ ಪ್ರದರ್ಶನ ನೀಡಿ, 400ಕ್ಕೂ ಅಧಿಕ ರನ್ ಗಳಿಸಿದ್ದರು. ಆ ನಂತರ ಭಾರತದ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈಗ ಅವರ ಫಾರ್ಮ್ ಕುಸಿದಿದೆ.

2024ರ ಐಪಿಎಲ್ ನಲ್ಲಿ ಯಶಸ್ಸು ಕಂಡ ನಂತರ ಪಂತ್ ಮೆಗಾ ಹರಾಜಿಗಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತ್ಯಜಿಸಿದ್ದರು. ಹರಾಜಿನ ವೇಳೆ ಲಕ್ನೊ ಸೂಪರ್ ಜಯಂಟ್ಸ್(ಎಲ್ಎಸ್ಜಿ)ತಂಡವು ದಾಖಲೆಯ 27 ಕೋಟಿ ರೂ. ನೀಡಿ ಪಂತ್ ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಭಾರೀ ನಿರೀಕ್ಷೆಗಳು ಹಾಗೂ ನಾಯಕತ್ವದ ಹೆಚ್ಚುವರಿ ಹೊಣೆಗಾರಿಕೆಯಿಂದಾಗಿ ಪಂತ್ ಪರದಾಡುತ್ತಿದ್ದಾರೆ. ಪಂತ್ ಟೀಮ್ ಇಂಡಿಯಾದ ಪರ 2024ರ ಜುಲೈ ಹಾಗೂ ಆಗಸ್ಟ್ನಲ್ಲಿ ಟಿ-20 ಹಾಗೂ ಏಕದಿನ ಪಂದ್ಯಗಳನ್ನು ಕೊನೆಯ ಬಾರಿ ಆಡಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ಭಾರತದ ಆಡುವ 11ರ ಬಳಗದಿಂದ ಹೊರಗುಳಿದಿದ್ದ ಪಂತ್ ಬದಲಿಗೆ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದರು.

ಇದೀಗ ಐಪಿಎಲ್ ನಲ್ಲಿ ಲಕ್ನೊ ತಂಡವನ್ನು ಪ್ರತಿನಿಧಿಸುತ್ತಿರುವ ಪಂತ್ ಅವರು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 3 ಪಂದ್ಯಗಳಲ್ಲಿ 0, 15 ಹಾಗೂ 2 ರನ್ ಗಳಿಸಿದ್ದಾರೆ. ಅವರ ಅಸ್ಥಿರ ಪ್ರದರ್ಶನವು ಲಕ್ನೊ ತಂಡದ ಮೇಲೆ ಹೆಚ್ಚಿನ ಒತ್ತಡವುಂಟು ಮಾಡುತ್ತಿದೆ. ಈ ಋತುವಿನಲ್ಲಿ ಲಯ ಕಂಡುಕೊಳ್ಳಲು ಲಕ್ನೊ ಪರದಾಡುತ್ತಿದೆ.

‘ಜಿಯೋಹಾಟ್ಸ್ಟಾರ್’ ಜೊತೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ, ಭಾರೀ ಮೊತ್ತಕ್ಕೆ ಲಕ್ನೊ ತೆಕ್ಕೆಗೆ ಸೇರಿರುವುದು ಪಂತ್ ಅವರ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬ ಮಾತನ್ನು ಅಲ್ಲಗಳೆದಿದ್ದಾರೆ.

‘‘ನನ್ನ ಪ್ರಕಾರ ದಾಖಲೆಯ ಮೊತ್ತಕ್ಕೆ ಲಕ್ನೊ ತಂಡವನ್ನು ಸೇರಿರುವುದು ಅವರ ಪ್ರದರ್ಶನದ ಮೇಲೆ ಪರಿಣಾಮಬೀರಿಲ್ಲ. ಆದರೆ ಅವರು ಈಗ ಶ್ರೇಷ್ಠ ಫಾರ್ಮ್ನಲ್ಲಿಲ್ಲ. ಭಾರತೀಯ ಕ್ರಿಕೆಟ್ ತಂಡದ ಬಿಳಿ ಚೆಂಡಿನ ಕ್ರಿಕೆಟ್ನಿಂದಲೂ ಹೊರಗುಳಿದಿದ್ದಾರೆ. ಈ ಪಂದ್ಯಾವಳಿಗೆ ಫ್ರಾಂಚೈಸಿಯೊಂದರ ನಾಯಕನಾಗಿ ಆಗಮಿಸಿದ್ದಾರೆ. ಹೀಗಾಗಿ ಅವರ ಮೇಲೆ ಭಾರೀ ನಿರೀಕ್ಷೆಗಳು ಇವೆ. ಕಳೆದ ವರ್ಷ ಪಂತ್ ಉತ್ತಮ ಪ್ರದರ್ಶನ ನೀಡಿದ್ದರು. ಸಹಜವಾಗಿಯೇ ಈ ವರ್ಷ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ’’ ಎಂದು ಚಾವ್ಲಾ ಹೇಳಿದ್ದಾರೆ.

ಪಂತ್ ರನ್ ಬರ ಎದುರಿಸುತ್ತಿರುವುದು ಲಕ್ನೊ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಬ್ಯಾಟಿಂಗ್ನಲ್ಲಿ ಗಮನಾರ್ಹ ಕೊಡುಗೆ ನೀಡುವಲ್ಲಿ ಅಸಮರ್ಥರಾಗಿರುವ ಪಂತ್ ಅವರು ವಿಕೆಟ್ಕೀಪಿಂಗ್ನಲ್ಲೂ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರಲ್ಲಿ ಪಂದ್ಯದ ದಿಕ್ಕನ್ನು ಬದಲಿಸುವ ಪ್ರತಿಭೆ ಹಾಗೂ ಸಾಮರ್ಥ್ಯವಿದೆ. ಒಂದು ಭರ್ಜರಿ ಇನಿಂಗ್ಸ್ ಟರ್ನಿಂಗ್ ಪಾಯಿಂಟ್ ಆಗಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News