ಐಪಿಎಲ್ 2025 | ಧೋನಿ ನಿವೃತ್ತಿ ಬಗ್ಗೆ ಸಿಎಸ್ಕೆ ಕೋಚ್ ಫ್ಲೆಮಿಂಗ್ ಹೇಳಿದ್ದೇನು?

PC : instagram.com / mahi7781
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಎಂ.ಎಸ್.ಧೋನಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಟ್ಟವಾಗಿ ಹರಡಿವೆ. ಧೋನಿ ಪೋಷಕರೂ ಕೂಡಾ 2008ರಲ್ಲಿ ಐಪಿಎಲ್ ಕ್ರೀಡಾಕೂಟ ಪ್ರಾರಂಭವಾದಾಗಿನಿಂದ ಇದೇ ಪ್ರಥಮ ಬಾರಿಗೆ ಕ್ರೀಡಾಂಗಣದಲ್ಲೇ ಕುಳಿತು ಐಪಿಎಲ್ ಪಂದ್ಯವೊಂದನ್ನು ವೀಕ್ಷಿಸಿದ್ದಾರೆ.
ಶನಿವಾರ ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವನ್ನು ಧೋನಿಯ ಪೋಷಕರಾದ ತಂದೆ ಪಾನ್ ಸಿಂಗ್ ಹಾಗೂ ತಾಯಿ ದೇವಕಿ ದೇವಿ ವೀಕ್ಷಿಸಿದ್ದರು. ಹಾಗೆಯೇ, ಈ ಪಂದ್ಯದ ವೀಕ್ಷಣೆಯ ಸಂದರ್ಭದಲ್ಲಿ ಧೋನಿ ಪತ್ನಿ ಸಾಕ್ಷಿ ಅವರು ತಮ್ಮ ಪುತ್ರಿ ಜೀವಾಳೊಂದಿಗೆ ಮಾತನಾಡುತ್ತಾ, “ಇದೇ ಕೊನೆ ಪಂದ್ಯ” ಎಂದು ಹೇಳಿದ್ದಾರೆ ಎಂದೂ ಹೇಳಲಾಗುತ್ತಿದೆ.
ಈ ಎರಡು ವಿಷಯಗಳನ್ನು ಆಧರಿಸಿಯೇ ಧೋನಿ ನಿವೃತ್ತಿಯ ಕುರಿತ ಚರ್ಚೆಗಳು ಬಿರುಸುಗೊಂಡಿವೆ. ಕೆಲವರು ಧೋನಿ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ ಎಂದು ಪೋಸ್ಟ್ ಗಳನ್ನೂ ಹಂಚಿಕೊಂಡಿದ್ದಾರೆ.
ಈ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, “ಧೋನಿ ಇನ್ನಷ್ಟು ದೃಢವಾಗಿ ಮುನ್ನಡೆಯಲಿದ್ದಾರೆ. ಅವರು ಕ್ರಿಕೆಟ್ ಓಟವನ್ನು ಅಂತ್ಯಗೊಳಿಸುವುದು ನನ್ನ ಕೆಲಸವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಧೋನಿಯ ನಿವೃತ್ತಿ ಕುರಿತು ಪ್ರಸ್ತಾಪಿಸಿದ ಸ್ಟೀಫನ್ ಫ್ಲೆಮಿಂಗ್, “ಇಲ್ಲ, ಅದನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಧೋನಿಯೊಂದಿಗೆ ಕೆಲಸ ಮಾಡುವುದನ್ನು ನಾನು ಆನಂದಿಸುತ್ತೇನೆ. ಅವರೀಗಲೂ ಬಲಿಷ್ಠವಾಗಿದ್ದಾರೆ. ಆದರೆ, ನೀವಷ್ಟೇ ನಿವೃತ್ತಿಯ ಕುರಿತು ಪ್ರಶ್ನಿಸುತ್ತೀರಿ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಒಂಭತ್ತನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ್ದರು. ತಂಡದ ಗೆಲುವಿಗೆ ಅಗತ್ಯವಿದ್ದ ರನ್ ಸರಾಸರಿ ಹೆಚ್ಚಾಗುತ್ತಿದ್ದರೂ, ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಶನಿವಾರ ನಡೆದ ದಿಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಧೋನಿ ಏಳನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರೂ, ವೇಗವಾಗಿ ರನ್ ಗಳಿಸಲು ವಿಫಲರಾಗಿದ್ದರಿಂದ, ಅವರು ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದ್ದರು.
ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಧೋನಿಯನ್ನು ಸಮರ್ಥಿಸಿಕೊಂಡ ಸ್ಟೀಫನ್ ಫ್ಲೆಮಿಂಗ್, ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ.
“ಧೋನಿ ಕ್ರೀಸ್ ಗೆ ಬಂದಾಗ, ಚೆಂಡು ನಿಧಾನ ಗತಿಯಲ್ಲಿ ಬ್ಯಾಟ್ ಗೆ ಬರುತ್ತಿತ್ತು. ಪಂದ್ಯದ ಮೊದಲರ್ಧ ಬ್ಯಾಟಿಂಗ್ ಗೆ ಉತ್ತಮವಾಗಿದ್ದರೂ, ಕ್ರಮೇಣ ಪಿಚ್ ನಿಧಾನ ಗತಿಯಲ್ಲಿ ವರ್ತಿಸಲಾರಂಭಿಸುತ್ತದೆ. ಹೀಗಾಗಿ, ನಾವು ಮುಂದಿನ ಪಂದ್ಯಗಳಲ್ಲಿ ಮೊದಲ ಬ್ಯಾಟಿಂಗ್ ಮಾಡಿ, ನಂತರ ಬೌಲಿಂಗ್ ಗೆ ಇಳಿಯಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ವಿಕೆಟ್ ನಷ್ಟ ಕ್ಕೆ ಕೇವಲ 158 ರನ್ ಗಳಿಸಲಷ್ಟೆ ಶಕ್ತವಾಗಿತ್ತು.
11 ಓವರ್ ನಲ್ಲಿ ಧೋನಿ ಕ್ರೀಸಿಗಿಳಿದಾಗ, ತಂಡದ ಗೆಲುವಿಗೆ 56 ಎಸೆತಗಳಲ್ಲಿ 110 ರನ್ ಗಳ ಅಗತ್ಯವಿತ್ತು. ಹೀಗಿದ್ದೂ, ಧೋನಿ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಲಿಲ್ಲ. ಈ ವೇಳೆ 26 ಬಾಲ್ ಗಳನ್ನು ಎದುರಿಸಿದ ಅವರು 30 ರನ್ ಗಳಿಸಿದರೆ, ಅವರೊಂದಿಗೆ ಕ್ರೀಸಿನಲ್ಲಿದ್ದ ಶಂಕರ್, 54 ಎಸೆತಗಳಲ್ಲಿ 69 ರನ್ ಕಲೆ ಹಾಕಿದ್ದರು.
“12-16 ಓವರ್ ಗಳ ನಡುವಿನ ಅವಧಿಯಲ್ಲಿ ಬ್ಯಾಟಿಂಗ್ ಮಾಡುವುದು ಕಠಿಣವಾಗಿತ್ತು. ಹೀಗಾಗಿ, ಪಂದ್ಯವು ನಿಧಾನವಾಗಿ ನಮ್ಮ ಕೈಯಿಂದ ಜಾರಿತು” ಎಂದು ಸ್ಟೀಫನ್ ಪ್ಲೆಮಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಿದ್ದೂ, ತಂಡವು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ ಎಂಬುದನ್ನು ಒಪ್ಪಿಕೊಂಡ ಅವರು, ನಮ್ಮ ತಂಡದಲ್ಲಿರುವ ಅತ್ಯುತ್ತಮ ಆಟಗಾರರನ್ನು ಬಳಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
“ಇತರ ತಂಡಗಳ ಬ್ಯಾಟರ್ ಗಳನ್ನು ಬೌಲಿಂಗ್ ಮೂಲಕ ಕಟ್ಟಿ ಹಾಕುವುದಕ್ಕೆ ಆದ್ಯತೆ ನೀಡುತ್ತಿದ್ದೇವೆಯೇ ಹೊರತು, ಬ್ಯಾಟಿಂಗ್ ಕಡೆ ಗಮನ ಹರಿಸಿಲ್ಲ. ರನ್ ಕಲೆ ಹಾಕಲು ಉತ್ತಮ ಲಯದಲ್ಲಿರುವ ಬ್ಯಾಟರ್ ಗಳ ಅಗತ್ಯವಿದೆ” ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ನಂತರ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಎರಡು ಮತ್ತು ಮೂರನೆಯ ಪಂದ್ಯಗಳಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದೆದುರು ಪರಾಭವಗೊಂಡಿತ್ತು. ನಂತರ, ಶನಿವಾರ ನಡೆದ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧವೂ ಮಂಡಿಯೂರಿದೆ.
ಮತ್ತೊಂದೆಡೆ, 25 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ದಿಲ್ಲಿ ಕ್ಯಾಪಿಟಲ್ಸ್ ತಂಡವು, ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.