ಅನಪೇಕ್ಷಿತ ದಾಖಲೆ ನಿರ್ಮಿಸಿದ ಧೋನಿ, ವಿಜಯ್ ಶಂಕರ್

ಧೋನಿ, ವಿಜಯ್ ಶಂಕರ್ | PC : X \ @ChennaiIPL
ಹೊಸದಿಲ್ಲಿ: ರನ್ ಚೇಸ್ ವೇಳೆ ಚುರುಕಿನ ಬ್ಯಾಟಿಂಗ್ ಮಾಡುವಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್ ಅಂತರದಿಂದ ಸೋತಿದೆ. ಈ ವೇಳೆ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಆಲ್ ರೌಂಡರ್ ವಿಜಯ್ ಶಂಕರ್ ಅನಪೇಕ್ಷಿತ ದಾಖಲೆ ನಿರ್ಮಿಸಿದರು.
ಗೆಲ್ಲಲು 184 ರನ್ ಗುರಿ ಬೆನ್ನಟ್ಟಿದ ಸಿಎಸ್‌ಕೆ, 10.4 ಓವರ್‌ಗಳಲ್ಲಿ 74 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಧೋನಿ ಕ್ರೀಸ್‌ಗೆ ಆಗಮಿಸಿದರು. ಚೆನ್ನೈಗೆ ಗೆಲ್ಲಲು 56 ಎಸೆತಗಳಲ್ಲಿ 110 ರನ್ ಅಗತ್ಯವಿದ್ದಾಗ ಧೋನಿ ಅವರು ವಿಜಯ್ ಶಂಕರ್ ಅವರೊಂದಿಗೆ ಕೈಜೋಡಿಸಿದರು. ‘ಬಿಗ್ ಹಿಟ್ಟರ್’ಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹೊರತಾಗಿಯೂ ಧೋನಿ ಹಾಗೂ ಶಂಕರ್ 4.2 ಓವರ್‌ಗಳಲ್ಲಿ ಕೇವಲ 32 ರನ್ ಕಲೆ ಹಾಕಿದರು. ಶಂಕರ್ 43 ಎಸೆತಗಳಲ್ಲಿ 17ನೇ ಓವರ್‌ನಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದರು. ಇದು ಈ ಋತುವಿನಲ್ಲಿ ದಾಖಲಾದ ನಿಧಾನಗತಿಯ ಅರ್ಧಶತಕವಾಗಿದೆ.
ಈ ವರ್ಷದ ಐಪಿಎಲ್ ನಲ್ಲಿ ದಾಖಲಾದ 4 ಮಂದಗತಿಯ ಅರ್ಧಶತಕದ ಪೈಕಿ ಮೂರನ್ನು ಚೆನ್ನೈ ತಂಡ ಗಳಿಸಿದೆ. ಇದು ಬ್ಯಾಟರ್‌ಗಳ ಉದ್ದೇಶದ ಬಗ್ಗೆ ಕಳವಳ ಹುಟ್ಟುಹಾಕಿದೆ.
ಧೋನಿ ಇಂದು ತಾನೆದುರಿಸಿದ 19ನೇ ಎಸೆತದಲ್ಲಿ ಮುಕೇಶ್ ಕುಮಾರ್ ಬೌಲಿಂಗ್ ನಲ್ಲಿ ಮೊದಲ ಬೌಂಡರಿ ಬಾರಿಸಿದರು. ಈ ಜೋಡಿಯು 9.2 ಓವರ್‌ಗಳಲ್ಲಿ ಮುರಿಯದ ಜೊತೆಯಾಟದಲ್ಲಿ 84 ರನ್ ಸೇರಿಸಿದೆ.