ಒತ್ತಡದಲ್ಲಿ ಮುಂಬೈ; ಪುಟಿದೇಳುವ ವಿಶ್ವಾಸದಲ್ಲಿ ಆರ್‌ಸಿಬಿ

PC : PTI
ಮುಂಬೈ: ಪ್ರಸಕ್ತ ಐಪಿಎಲ್ ಟಿ-20 ಟೂರ್ನಿಯಲ್ಲಿ ತನ್ನ 5ನೇ ಪಂದ್ಯವನ್ನಾಡಲು ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಪುಟಿದೇಳುವ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡವನ್ನು ಎದುರಿಸಲಿದೆ. ತನ್ನ ದುರ್ಬಲ ಬ್ಯಾಟಿಂಗ್ ವಿಭಾಗದತ್ತ ತನ್ನ ಗಮನ ಕೇಂದ್ರೀಕರಿಸಿದೆ.
ಮುಂಬೈ ಇಂಡಿಯನ್ಸ್ ತಂಡವು ಈ ತನಕ ಆಡಿರುವ ಮೊದಲ 4 ಐಪಿಎಲ್ ಪಂದ್ಯಗಳಲ್ಲಿ ಮೂರರಲ್ಲಿ ಸೋಲುಂಡಿದೆ. ಪ್ಲೇ ಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ತನ್ನ ತಪ್ಪನ್ನು ಬೇಗನೆ ತಿದ್ದಿಕೊಳ್ಳಬೇಕಾದ ಒತ್ತಡದಲ್ಲಿದೆ.
ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ರಿಯಾನ್ ರಿಕೆಲ್ಟನ್ ಮಾತ್ರ ಅರ್ಧಶತಕ ಗಳಿಸಿದ್ದಾರೆ. ಉಳಿದೆಲ್ಲ ತಂಡಗಳಿಗೆ ಹೋಲಿಸಿದರೆ ಮುಂಬೈ ತಂಡವು ಬೆರಳೆಣಿಕೆಯ ಅರ್ಧಶತಕವನ್ನು ಗಳಿಸಿದೆ. ಉತ್ತಮ ಆರಂಭದ ಕೊರತೆ, ಮಧ್ಯಮ ಸರದಿಯಲ್ಲಿ ತಿಲಕ್ ವರ್ಮಾರಂತಹ ಆಟಗಾರರ ಕಳಪೆ ಪ್ರದರ್ಶನವು ತಂಡಕ್ಕೆ ಸಾಕಷ್ಟು ಘಾಸಿಗೊಳಿಸಿದೆ.
ಮೊಣಕಾಲು ನೋವಿನಿಂದಾಗಿ ಹಿಂದಿನ ಪಂದ್ಯದಿಂದ ವಂಚಿತರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಆಡುವುದು ಅನುಮಾನ. ಅಂಕಪಟ್ಟಿಯ ಅಗ್ರ ಸರದಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಬೇಕಾದ ಸ್ಥಿತಿಯಲ್ಲಿರುವ ಮುಂಬೈ ತಂಡಕ್ಕೆ ರೋಹಿತ್ ಪುನರಾಗಮನ ಅತ್ಯಂತ ಮುಖ್ಯವಾಗಿದೆ. ಜಸ್‌ಪ್ರಿತ್ ಬುಮ್ರಾ ಮುಂಬೈ ತಂಡಕ್ಕೆ ಪುನರಾಗಮನವಾಗುತ್ತಿರುವುದು ಒಂದಷ್ಟು ಭರವಸೆ ಮೂಡಿಸಿದೆ.
ಮತ್ತೊಂದೆಡೆ, ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ್ದ ಅಲ್ಪ ಅಂತರದಿಂದ ಸೋತ ನಂತರ ಮರಳಿ ಹೋರಾಡುವತ್ತ ಚಿತ್ತಹರಿಸಿದೆ. ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಮಿಶ್ರ ಅರಂಭ ಪಡೆದಿದ್ದಾರೆ. ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ ಅವರ ಆಲ್‌ರೌಂಡ್ ಪ್ರದರ್ಶನದ ಮೇಲೆ ಆರ್‌ಸಿಬಿ ಅವಲಂಬಿತವಾಗಿದೆ. ಈ ಮೂವರು ಆಟಗಾರರು ಈ ತನಕ ಮಹತ್ವದ ಕೊಡುಗೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ಸ್ಟಾರ್ ಟಿಮ್ ಡೇವಿಡ್ ಆರ್‌ಸಿಬಿ ಪಾಳಯಕ್ಕೆ ಸೇರಿದ್ದು, ಚಿಕ್ಕ ಬೌಂಡರಿ ಹೊಂದಿರುವ ವಾಂಖೆಡೆ ಸ್ಟೇಡಿಯಮ್‌ನಲ್ಲಿ ಡೇವಿಡ್ ನಿರ್ಣಾಯಕ ಅಂಶವಾಗಿದ್ದಾರೆ.
ಆರ್‌ಸಿಬಿಯ ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿಗಳಾದ ಜೋಶ್ ಹೇಝಲ್‌ವುಡ್ ಹಾಗೂ ಭುವನೇಶ್ವರ ಕುಮಾರ್ ಅವರಿದ್ದಾರೆ. ಆರ್‌ಸಿಬಿ ಸ್ಪಿನ್ನರ್‌ಗಳು ಇನ್ನಷ್ಟೇ ತಮ್ಮ ಲಯ ಕಂಡುಕೊಳ್ಳಬೇಕಾಗಿದೆ.
ಮಧ್ಯಮ ಓವರ್ ಗಳಲ್ಲಿ ಕುಸಿತ ಕಾಣದೆ ಆರ್‌ಸಿಬಿಯ ಶಿಸ್ತುಬದ್ಧ ಬೌಲಿಂಗ್ ಘಟಕವನ್ನು ಎದುರಿಸುವುದು ಮುಂಬೈ ಇಂಡಿಯನ್ಸ್‌ಗೆ ಮಹತ್ವದ ಸವಾಲಾಗಿದೆ.
ಐತಿಹಾಸಿಕವಾಗಿ ಮುಂಬೈ ತಂಡವು ಆರ್‌ಸಿಬಿ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ ಮುನ್ನಡೆಯಲ್ಲಿದೆ. ಅದರಲ್ಲೂ ತವರು ಮೈದಾನದಲ್ಲಿ ಮೇಲುಗೈ ಸಾಧಿಸುತ್ತಾ ಬಂದಿದೆ. 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಮುಂಬೈನಲ್ಲಿ ಆಡಿರುವ ಏಕೈಕ ಪಂದ್ಯದಲ್ಲಿ ಮುಂಬೈ ತಂಡವು 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಈಗಿನ ಫಾರ್ಮ್ ಪ್ರಕಾರ ಪಂದ್ಯದಲ್ಲಿ ಸಮಬಲದ ಹೋರಾಟ ಇರಲಿದ್ದು, ಆರ್‌ಸಿಬಿ ಭಾರೀ ಆತ್ಮವಿಶ್ವಾಸದಲ್ಲಿದ್ದರೆ, ಮುಂಬೈ ತಂಡ ಮೊದಲಿನ ಲಯಕ್ಕೆ ಮರಳುವ ಯೋಚನೆಯಲ್ಲಿದೆ.
ಮುಂಬೈ ತಂಡವು ನಿರಂತರ ಸೋಲನ್ನು ತಡೆಯುವ ಗುರಿ ಇಟ್ಟುಕೊಂಡಿದ್ದರೆ, ಆರ್‌ಸಿಬಿ ಮತ್ತೊಂದು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಗಮನ ಹರಿಸಿದೆ. ಉಭಯ ತಂಡಗಳಲ್ಲಿ ಸಾಕಷ್ಟು ಹೊಡಿಬಡಿ ಆಟಗಾರರಿದ್ದು, ಸೋಮವಾರ ರಾತ್ರಿ ಭಾರೀ ಪೈಪೋಟಿಯುಕ್ತ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ.
ಹೆಡ್-ಟು-ಹೆಡ್ ದಾಖಲೆ
ಆಡಿರುವ ಪಂದ್ಯಗಳು: 33
ಮುಂಬೈ ಇಂಡಿಯನ್ಸ್‌ಗೆ ಜಯ: 19
ರಾಯಲ್ ಚಾಲೆಂಜರ್ಸ್‌ಗೆ ಗೆಲುವು: 14
ಗರಿಷ್ಠ ಸ್ಕೋರ್: 2015ರ ಮೇ 9ರಂದು ವಾಂಖೆಡೆಯಲ್ಲಿ ಆರ್‌ಸಿಬಿ ತಂಡದಿಂದ 235/1
ಕನಿಷ್ಠ ಸ್ಕೋರ್: 2021ರ ಸೆ.26ರಂದು ದುಬೈ ಸ್ಟೇಡಿಯಮ್‌ನಲ್ಲಿ ಮುಂಬೈ ತಂಡದಿಂದ 111 ರನ್
ಗರಿಷ್ಠ ಸ್ಕೋರ್: ವಿರಾಟ್ ಕೊಹ್ಲಿ(913 ರನ್)
ಗರಿಷ್ಠ ಸ್ಕೋರ್(ವೈಯಕ್ತಿಕ): ಎಬಿ ಡಿ ವಿಲಿಯರ್ಸ್ (ಔಟಾಗದೆ 133)
ಗರಿಷ್ಠ ವಿಕೆಟ್‌ಗಳು: ಜಸ್‌ಪ್ರಿತ್ ಬುಮ್ರಾ(24 ವಿಕೆಟ್‌ಗಳು)
ತಂಡಗಳು
*ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್, ರಾಬಿನ್ ಮಿಂಝ್, ಬೆವನ್ ಜೇಕಬ್ಸ್, ನಮನ್ ಧಿರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ರೀಸ್ ಟೋಪ್ಲೆ, ದೀಪಕ್ ಚಹಾರ್, ಜಸ್‌ಪ್ರಿತ್ ಬುಮ್ರಾ, ಅರ್ಜುನ್ ತೆಂಡುಲ್ಕರ್, ಮುಜೀಬ್‌ವುರ್ ರೆಹ್ಮಾನ್, ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ ಹಾಗೂ ಇತರರು.
*ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್(ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ,ಜೋಶ್ ಹೇಝಲ್‌ವುಡ್, ಭುವನೇಶ್ವರ ಕುಮಾರ್, ನುವಾನ್ ತುಷಾರ, ಲುಂಗಿ ಎನ್‌ಗಿಡಿ ಹಾಗೂ ಇತರರು.