64 ತಂಡಗಳ ಫಿಫಾ ವಿಶ್ವಕಪ್ ಉತ್ತಮ ಕಲ್ಪನೆಯಲ್ಲ: ಯುಇಎಫ್ಎ ಅಧ್ಯಕ್ಷ
Photo - AFP
ಬೆಲ್ಗ್ರೇಡ್: 2030ರ ಆವೃತ್ತಿಯ ಪುರುಷರ ಫುಟ್ಬಾಲ್ ವಿಶ್ವಕಪ್ನ್ನು 64 ತಂಡಗಳ ಪಂದ್ಯಾವಳಿಯಾಗಿಸುವುದು ಕೆಟ್ಟ ಕಲ್ಪನೆಯಾಗಿದೆ ಎಂದು ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ಗಳ ಒಕ್ಕೂಟದ (ಯುಇಎಫ್ಎ) ಅಧ್ಯಕ್ಷ ಅಲೆಕ್ಸಾಂಡರ್ ಸೆಫರಿನ್ ಗುರುವಾರ ಹೇಳಿದ್ದಾರೆ.
ಫಿಫಾ ಉಪಾಧ್ಯಕ್ಷರೂ ಆಗಿರುವ ಸೆಫರಿನ್ ಮಾರ್ಚ್ 6ರಂದು ನಡೆದ ಫಿಫಾ ಆಡಳಿತ ಮಂಡಳಿಯ ಆನ್ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಭ್ಯೆೌ ವಿಶ್ವಕಪ್ನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 64ಕ್ಕೆ ಹೆಚ್ಚಿಸುವ ಅನಿರೀಕ್ಷಿತ ಪ್ರಸ್ತಾವವನ್ನು ಉರುಗ್ವೆ ನಿಯೋಗವು ಮುಂದಿಟ್ಟಿತು.
‘‘ಈ ಪ್ರಸ್ತಾವದಿಂದ ನಿಮಗಿಂತಲೂ ಹೆಚ್ಚು ನಾನು ಆಶ್ಚರ್ಯಚಕಿತನಾಗಿದ್ದೇನೆ’’ ಎಂದು ಸರ್ಬಿಯದ ಬೆಲ್ಗ್ರೇಡ್ನಲ್ಲಿ ನಡೆದ ಯುಇಎಫ್ಎಯ ವಾರ್ಷಿಕ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಫರಿನ್ ನುಡಿದರು. ‘‘ಇದೊಂದು ಕೆಟ್ಟ ಕಲ್ಪನೆಯಂತೆ ನನಗೆ ಕಾಣುತ್ತಿದೆ’’ ಎಂದು ಅವರು ಹೇಳಿದರು.
2022ರವರೆಗೆ ಫುಟ್ಬಾಲ್ ವಿಶ್ವಕಪ್ 32 ತಂಡಗಳ ಪಂದ್ಯಾವಳಿಯಾಗಿತ್ತು. 2026ರಿಂದ ವಿಶ್ವಕಪ್ನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 48ಕ್ಕೆ ಹೆಚ್ಚಿಸಲಾಗಿದೆ. ಈಗ ಈ ಸಂಖ್ಯೆಗೆ ಇನ್ನೂ 16 ತಂಡಗಳನ್ನು ಸೇರಿಸುವ ಪ್ರಸ್ತಾವಕ್ಕೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫ್ಯಾಂಟಿನೊ ಅವರ ಬೆಂಬಲ ಇರುವಂತೆ ಅನಿಸುತ್ತಿದೆ. ಹಣ ಸಂಗ್ರಹಿಸಲು ಮತ್ತು ಜಾಗತಿಕವಾಗಿ ಕ್ರೀಡೆಯ ಅಭಿವೃದ್ಧಿಗೆ ಉತ್ತೇಜನ ನೀಡಲು ತಂಡಗಳ ಸಂಖ್ಯೆಯ ಹೆಚ್ಚಳವನ್ನು ಅವರು ಯಾವಾಗಲೂ ಬೆಂಬಲಿಸುತ್ತಾರೆ.
64 ತಂಡಗಳ ಪಂದ್ಯಾವಳಿಯು ಆಟದ ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ಹೆಚ್ಚಿನ ಖಂಡಗಳಲ್ಲಿ ಪಂದ್ಯಾವಳಿಗೆ ಅರ್ಹತೆ ಪಡೆಯುವ ಪ್ರಕ್ರಿಯೆಗಳಿಗೆ ಹೆಚ್ಚಿನ ಮೌಲ್ಯವಿರುವುದಿಲ್ಲ ಎಂದು ಅದರ ಟೀಕಾಕಾರರು ಅಭಿಪ್ರಾಯಪಡುತ್ತಾರೆ.
‘‘ಇದು ಸ್ವತಃ ವಿಶ್ವಕಪ್ಗೇ ಉತ್ತಮ ಕಲ್ಪನೆಯಲ್ಲ ಮತ್ತು ಅರ್ಹತಾ ಪಂದ್ಯಗಳಿಗೂ ಉತ್ತಮ ಕಲ್ಪನೆಯಲ್ಲ’’ ಎಂದು ಸೆಫರಿನ್ ಹೇಳಿದರು.