ವಿರಾಟ್ ಕೊಹ್ಲಿ ಬೆರಳಿಗೆ ಗಾಯ: ಚಿಂತಿಸುವ ಅಗತ್ಯವಿಲ್ಲ ಎಂದ ಕೋಚ್ ಫ್ಲವರ್
ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಬುಧವಾರ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಐಕಾನ್ ವಿರಾಟ್ ಕೊಹ್ಲಿ ಗಾಯದ ಭೀತಿಗೆ ಒಳಗಾಗಿದ್ದಾರೆ. ಈ ಬಗ್ಗೆ ಯಾರೂ ಕೂಡ ಚಿಂತಿಸುವ ಅಗತ್ಯವಿಲ್ಲ ಎಂದು ಆರ್ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
ಫೀಲ್ಡಿಂಗ್ ನಿರತರಾಗಿದ್ದಾಗ ಕೊಹ್ಲಿ ಅವರ ಬೆರಳಿಗೆ ಗಾಯವಾಗಿದೆ. ಸ್ಟಾರ್ ಬ್ಯಾಟರ್ನ ಪರಿಸ್ಥಿತಿಯ ಬಗ್ಗೆ ಯಾವುದೇ ಕಳವಳಪಡುವ ಅಗತ್ಯವಿಲ್ಲ ಎಂದು ಫ್ಲವರ್ ಹೇಳಿದರು.
‘‘ವಿರಾಟ್ ಕೊಹ್ಲಿ ಚೆನ್ನಾಗಿದ್ದಾರೆ. ಅವರ ಬಗ್ಗೆ ಯಾವುದೇ ಚಿಂತೆಯಿಲ್ಲ’’ ಎಂದು ಪಂದ್ಯದ ನಂತರ ಫ್ಲವರ್ ಹೇಳಿದರು.
ಆರ್ಸಿಬಿ ತಂಡ ಗುಜರಾತ್ ವಿರುದ್ಧ ತವರು ಮೈದಾನದಲ್ಲಿ 8 ವಿಕೆಟ್ಗಳಿಂದ ಸೋಲುಂಡಿದೆ. ಈ ವರ್ಷ ಆಡಿರುವ 3 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿದೆ.
ಗುಜರಾತ್ ತಂಡವು ಗೆಲುವಿಗೆ 170 ರನ್ ಚೇಸ್ ಮಾಡುತ್ತಿದ್ದಾಗ ಕೊಹ್ಲಿ ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ತಡೆಯಲು ಯತ್ನಿಸಿದರು. ಈ ವೇಳೆ ಅವರ ಬೆರಳಿಗೆ ಗಾಯವಾಗಿದೆ. ತಕ್ಷಣವೇ ಆರ್ಸಿಬಿಯ ಫಿಸಿಯೋ, ಕೊಹ್ಲಿ ಬಳಿ ಧಾವಿಸಿ ಚಿಕಿತ್ಸೆ ನೀಡಿದ್ದು, ಈ ವೇಳೆ ಕೊಹ್ಲಿ ತೀವ್ರ ನೋವು ಅನುಭವಿಸಿದಂತೆ ಕಂಡು ಬಂದರು.