ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ನ್ಯೂಝಿಲ್ಯಾಂಡ್‌ ನ ಮಾರ್ಟಿನ್ ಗಪ್ಟಿಲ್ ನಿವೃತ್ತಿ

Update: 2025-01-08 17:33 GMT

ಮಾರ್ಟಿನ್ ಗಪ್ಟಿಲ್  | PC : PTI 

ಹ್ಯಾಮಿಲ್ಟನ್: ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ತನ್ನ ನಿವೃತ್ತಿಯನ್ನು ಪ್ರಕಟಿಸಿರುವ ನ್ಯೂಝಿಲ್ಯಾಂಡ್‌ ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 14 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು.

38ರ ಹರೆಯದ ಗಪ್ಟಿಲ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 23 ಶತಕಗಳನ್ನು ಗಳಿಸಿದ್ದಾರೆ. ಕಿವೀಸ್ ತಂಡವನ್ನು 198 ಏಕದಿನ, 122 ಟಿ20 ಹಾಗೂ 47 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಗಪ್ಟಿಲ್ 2022ರಲ್ಲಿ ನ್ಯೂಝಿಲ್ಯಾಂಡ್ ಪರ ಕೊನೆಯ ಪಂದ್ಯ ಆಡಿದ್ದರು. ಟಿ20 ಕ್ರಿಕೆಟ್‌ನಲ್ಲಿ ತನ್ನ ದೇಶದ ಗರಿಷ್ಠ ರನ್ ಸ್ಕೋರರ್(3,531 ರನ್)ಆಗಿ ನಿವೃತ್ತಿಯಾಗಿದ್ದಾರೆ.

ಗಪ್ಟಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 7,346 ರನ್ ಗಳಿಸಿದ್ದು, ನ್ಯೂಝಿಲ್ಯಾಂಡ್‌ ನ ಸಾರ್ವಕಾಲಿಕ ರನ್ ಸ್ಕೋರರ್‌ ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಗಪ್ಟಿಲ್ ವಿಶ್ವದಾದ್ಯಂತ ವಿವಿಧ ಟಿ20 ಲೀಗ್‌ ಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಲಿದ್ದಾರೆ.

2009ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿರುವ ಗಪ್ಟಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಕಿವೀಸ್‌ನ ಮೊದಲ ಆಟಗಾರ ಎನಿಸಿಕೊಂಡು ಮಹತ್ವದ ಮೈಲಿಗಲ್ಲು ತಲುಪಿದರು. ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ 2015ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಗಪ್ಟಿಲ್ ಔಟಾಗದೆ 237 ರನ್ ಗಳಿಸಿದ್ದರು.

ಗಪ್ಟಿಲ್ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿನುದ್ದಕ್ಕೂ 1,385 ಬೌಂಡರಿ ಹಾಗೂ 383 ಸಿಕ್ಸರ್‌ ಗಳನ್ನು ಸಿಡಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಎಂ.ಎಸ್. ಧೋನಿ ಅವರನ್ನು ರನೌಟ್ ಮಾಡಿ ಮ್ಯಾಂಚೆಸ್ಟರ್‌ನಲ್ಲಿ ಭಾರತ ವಿರುದ್ದ ನ್ಯೂಝಿಲ್ಯಾಂಡ್ ತಂಡ ಗೆಲುವು ದಾಖಲಿಸುವಲ್ಲಿ ನೆರವಾಗಿ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.

ಚಿಕ್ಕಂದಿನಲ್ಲಿಯೇ ನ್ಯೂಝಿಲ್ಯಾಂಡ್ ಪರ ಆಡಬೇಕೆಂಬ ಕಸು ಕಂಡಿದ್ದೆ. ನನ್ನ ದೇಶದ ಪರ 367 ಪಂದ್ಯಗಳನ್ನು ಆಡುವ ಅದೃಷ್ಟ ಲಭಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ. ನನ್ನೊಂದಿಗೆ ಹಲವು ವರ್ಷಗಳ ಕಾಲ ಇದ್ದ ಎಲ್ಲ ಸಹ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುವೆ. ನನಗೆ ಅಂಡರ್-19 ಮಟ್ಟದಿಂದಲೂ ತರಬೇತಿ ನೀಡುತ್ತಿರುವ ಮಾರ್ಕ್ ಒ ಡೊನ್ನಿಲ್‌ ಗೆ ಧನ್ಯವಾದ ಸಲ್ಲಿಸುವೆ. ತೆರೆಮರೆಯಲ್ಲಿ ಶ್ರಮಿಸಿದ್ದ ನನ್ನ ಮ್ಯಾನೇಜರ್‌ಗೆ ವಿಶೇಷ ಧನ್ಯವಾದಗಳು ಎಂದು ಗಪ್ಟಿಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News