ಮಾ.20ರಂದು ರತ್ನಾಕರ ಶೆಟ್ಟಿಗೆ ಎಂಸಿಎ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Update: 2025-03-18 23:24 IST
ಮಾ.20ರಂದು ರತ್ನಾಕರ ಶೆಟ್ಟಿಗೆ ಎಂಸಿಎ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Photo credit - X

  • whatsapp icon

ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ)ಗುರುವಾರ ಸಂಜೆ ಬಿಕೆಸಿಯಲ್ಲಿರುವ ಎಂಸಿಎಯ ಶರದ್ ಪವಾರ್ ಒಳಾಂಗಣ ಅಕಾಡೆಮಿ ಮೈದಾನದಲ್ಲಿ ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕ್ರಿಕೆಟ್ ಆಡಳಿತಾಧಿಕಾರಿ ಪ್ರೊ.ರತ್ನಾಕರ ಶೆಟ್ಟಿ ಅವರಿಗೆ ‘ಆಡಳಿತಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಿದೆ.

ಒಮ್ಮೆ ಎಂಸಿಎ ಕಾರ್ಯದರ್ಶಿಯಾಗಿದ್ದ ರತ್ನಾಕರ ಶೆಟ್ಟಿ ಅವರು ನಂತರ ಬಿಸಿಸಿಐನಲ್ಲಿ ಹಿರಿಯ ಆಡಳಿತ ಸಿಬ್ಬಂದಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.

‘ನಿಮ್ಮ ಗಮನಾರ್ಹ ನಾಯಕತ್ವ, ದೂರದೃಷ್ಟಿ ಹಾಗೂ ದಣಿವರಿಯದ ಸಮರ್ಪಣೆ ಶಾಶ್ವತ ಪರಿಣಾಮ ಬೀರಿದೆ. ಆಡಳಿತಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ನಿಮ್ಮ ಸಾಧನೆ ಗುರುತಿಸಲು ನಾವು ಸಂತೋಷಪಡುತ್ತೇವೆ’ ಎಂದು ರತ್ನಾಕರ ಶೆಟ್ಟಿಗೆ ಬರೆದ ಪತ್ರದಲ್ಲಿ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಮಾಹಿತಿ ನೀಡಿದ್ದಾರೆ.

ಭಾರತದ ಮಾಜಿ ನಾಯಕರಾದ ದಿಲೀಪ್ ವೆಂಗ್ಸರ್ಕಾರ್(ಪುರುಷರ ವಿಭಾಗ)ಹಾಗೂ ಡಯಾನಾ ಎಡುಲ್ಜಿ(ಮಹಿಳೆಯರ ವಿಭಾಗ)ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಎಂಸಿಎ 2022-23 ಹಾಗೂ 2023-24 ಎರಡು ಋತುಗಳಿಗೆ ಪ್ರಶಸ್ತಿಗಳನ್ನು ನೀಡಲಿದೆ. ಭಾರತದ ಟೆಸ್ಟ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 2022-23ರ ವರ್ಷದ ಅತ್ಯುತ್ತಮ ಹಿರಿಯ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ವೀಕರಿಸಿದರೆ, ಸರ್ಫರಾಝ್ ಖಾನ್ ಆ ಋತುವಿನ ಅತ್ಯುತ್ತಮ ರಣಜಿ ಟ್ರೋಫಿ ಕ್ರಿಕೆಟಿಗೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

2023-24ರ ಋತುವಿನಲ್ಲಿ ವೇಗದ ಬೌಲರ್ ಮೋಹಿತ್ ಅವಸ್ಥಿ ‘ವರ್ಷದ ಅತ್ಯುತ್ತಮ ಹಿರಿಯ ಕ್ರಿಕೆಟಿಗ’ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಆಫ್ ಸ್ಪಿನ್ ಆಲ್ರೌಂಡರ್, ಮುಂಬೈ ಕನ್ನಡಿಗ ತನುಷ್ ಕೋಟ್ಯಾನ್ ‘ವರ್ಷದ ಅತ್ಯುತ್ತಮ ರಣಜಿ ಟ್ರೋಫಿ ಕ್ರಿಕೆಟಿಗ’ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಸಮಾರಂಭದ ಮುಖ್ಯ ಅತಿಥಿ, ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಮಹಾರಾಷ್ಟ್ರ ಸರಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿರುವ, ಮಾಜಿ ಎಂಸಿಎ ಅಧ್ಯಕ್ಷ ಆಶೀಶ್ ಶೆಲಾರ್ ಗೌರವ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News