ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ ವೇಗದ ಬೌಲರ್ ಗಳ ಗಾಯದ ಚಿಂತೆ
Source: IPLT20.com
ಹೊಸದಿಲ್ಲಿ,: ಲಕ್ನೊ ಸೂಪರ್ ಜೈಂಟ್ಸ್ ತಂಡ 2025ರ ಆವೃತ್ತಿಯ ಐಪಿಎಲ್ನಲ್ಲಿ ತನ್ನ ಮೊದಲ ಪಂದ್ಯ ಆಡಲು ದಿನಗಣನೆ ಆರಂಭವಾಗಿದ್ದರೂ ವೇಗದ ಬೌಲರ್ಗಳಾದ ಆಕಾಶ್ ದೀಪ್, ಅವೇಶ್ ಖಾನ್, ಮುಹ್ಸಿನ್ ಖಾನ್ ಹಾಗೂ ಮಯಾಂಕ್ ಯಾದವ್ ಗಾಯದ ಸಮಸ್ಯೆಯಿಂದ ಇನ್ನೂ ಮುಕ್ತರಾಗಿಲ್ಲ.
ನವೆಂಬರ್ ನಲ್ಲಿ ನಡೆದಿದ್ದ ಮೆಗಾ ಹರಾಜಿಗಿಂತ ಮೊದಲು ಮುಹ್ಸಿನ್ ಲಕ್ನೊ ತಂಡದಲ್ಲಿ ಉಳಿದುಕೊಂಡಿದ್ದರು.
ಲಕ್ನೊ ತಂಡದಿಂದ ಉಳಿಸಲ್ಪಟ್ಟಿರುವ ಇನ್ನೋರ್ವ ವೇಗದ ಬೌಲರ್ ಮಯಾಂಕ್ ಹಾಗೂ ಆಕಾಶ್ ದೀಪ್ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ.
ಮಯಾಂಕ್ ಬೌಲಿಂಗ್ ಮಾಡಲು ಆರಂಭಿಸಿದ್ದರೂ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಆಸ್ಟ್ರೇಲಿಯದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಬೆನ್ನುನೋವಿಗೆ ಒಳಗಾಗಿದ್ದ ಆಕಾಶ್ ದೀಪ್ ಶೀಘ್ರವೇ ಫಿಟ್ ಆಗುವ ಸಾಧ್ಯತೆ ಇಲ್ಲ. ಈ ಋತುವಿನ ಕೆಲವು ಪಂದ್ಯಗಳಿಂದ ವಂಚಿತರಾಗುವ ನಿರೀಕ್ಷೆ ಇದೆ. ಅವೇಶ್ ಅವರು ಫಿಟ್ನೆಸ್ ಪಡೆದಿದ್ದು, ಇನ್ನಷ್ಟೇ ತಂಡವನ್ನು ಸೇರ್ಪಡೆಯಾಗಬೇಕಾಗಿದೆ.
ಮುಹ್ಸಿನ್ ಕೆಲವೇ ದಿನಗಳ ಹಿಂದೆ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದರು. ರಿಷಭ್ ಪಂತ್ ನಾಯಕತ್ವದಲ್ಲಿ ಲಕ್ನೊ ತಂಡ ತನ್ನ ಅಭಿಯಾನ ಆರಂಭಿಸುವ ಮೊದಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಇಬ್ಬರು ಮೀಸಲು ಆಟಗಾರರಾದ ಶಾರ್ದೂಲ್ ಠಾಕೂರ್ ಹಾಗೂ ಶಿವಂ ಮಾವಿ ತಂಡದೊಂದಿಗಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪ್ರಾಕ್ಟೀಸ್ ಅವಧಿಗಳಲ್ಲಿ ಸಕ್ರಿಯರಾಗಿದ್ದಾರೆ.
ಶಾರ್ದೂಲ್ ಹಾಗೂ ಶಿವಂ ಮಾವಿ ಮೆಗಾ ಹರಾಜಿನ ವೇಳೆ ಮಾರಾಟವಾಗದೆ ಉಳಿದಿದ್ದರು. ಲಕ್ನೊ ಪಾಳಯದಲ್ಲಿ ವೇಗದ ಬೌಲರ್ಗಳು ಗಾಯದ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.
ಲಕ್ನೊ ತಂಡ ಹರಾಜಿನ ವೇಳೆ ಭಾರತದ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಶಮರ್ ಜೋಸೆಫ್ ಏಕೈಕ ವಿದೇಶಿ ವೇಗದ ಬೌಲರ್ ಆಗಿದ್ದಾರೆ.
ಝಹೀರ್ ಖಾನ್ ನೇತೃತ್ವದ ಕೋಚಿಂಗ್ ತಂಡವು ಠಾಕೂರ್ ಹಾಗೂ ಮಾವಿ ಅವರನ್ನು ಬದಲಿ ಆಟಗಾರರಾಗಿ ಕಣಕ್ಕಿಳಿಸಲು ಎದುರು ನೋಡುತ್ತಿದೆ. ಠಾಕೂರ್ ಹಾಗೂ ಮಾವಿ ದೇಶಿ ಕ್ರಿಕೆಟ್ನಲ್ಲಿ ತಮ್ಮ ರಾಜ್ಯಗಳ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.
ಠಾಕೂರ್ ಬ್ಯಾಟಿಂಗ್ನಲ್ಲಿ ಗಮನಾರ್ಹ ಕೊಡುಗೆ ನೀಡಲು ಶಕ್ತರಾಗಿದ್ದು, ಮಾವಿ ಕೆಳ ಸರದಿಯಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡಬಲ್ಲರು.