ವಿಶೇಷ ಒಲಿಂಪಿಕ್ಸ್ ವಿಂಟರ್ ಗೇಮ್ಸ್ ತಂಡವನ್ನು ಭೇಟಿಯಾದ ಪ್ರಧಾನಿ ಮೋದಿ

Photo : x@narendramodi
ಹೊಸದಿಲ್ಲಿ: ಇಟಲಿಯ ಟುರಿನ್ ನಲ್ಲಿ ನಡೆದ 2025 ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟದಲ್ಲಿ ಅದ್ಭುತ ನಿರ್ವಹಣೆ ನೀಡಿ ಭಾರತಕ್ಕೆ ಮರಳಿರುವ ಕ್ರೀಡಾಪಟುಗಳಿಗೆ ಸೋಮವಾರ ‘ಸ್ಪೆಷಲ್ ಒಲಿಂಪಿಕ್ಸ್ ಭಾರತ್’ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ.
30 ಅತ್ಲೀಟ್ಗಳು ಮತ್ತು 19 ಬೆಂಬಲ ಸಿಬ್ಬಂದಿಯನ್ನು ಒಳಗೊಂಡ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸಿದರು. ತಂಡವು 8 ಚಿನ್ನ, 18 ಬೆಳ್ಳಿ ಮತ್ತು 7 ಕಂಚು ಸೇರಿದಂತೆ 33 ಪದಕಗಳನ್ನು ಗೆದ್ದಿದೆ.
‘‘ಇಟಲಿಯ ಟುರಿನ್ನಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ನಲ್ಲಿ ದೇಶಕ್ಕೆ ಕೀರ್ತಿ ತಂದಿರುವ ನಮ್ಮ ಅತ್ಲೀಟ್ಗಳ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ನಮ್ಮ ಅದ್ಭುತ ತಂಡವು 33 ಪದಕಗಳನ್ನು ತಂದಿದೆ. ತಂಡವನ್ನು ಸಂಸತ್ನಲ್ಲಿ ಭೇಟಿಯಾಗಿ ಅವರ ಸಾಧನೆಗಳನ್ನು ಅಭಿನಂದಿಸಿದೆ’’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಪ್ರಧಾನಿ ಮೋದಿಯ ಸಂದೇಶವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡರು. ‘‘ಅತ್ಲೀಟ್ಗಳು ತಮ್ಮ ‘ಪರಮ-ಮಿತ್ರ’ನನ್ನು ಭೇಟಿಯಾದರು’’ ಎಂಬುದಾಗಿ ಅವರು ಬಣ್ಣಿಸಿದ್ದಾರೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪದಕ ವಿಜೇತರಿಗೆ ನೀಡುವ ನಗದು ಬಹುಮಾನವನ್ನು ಹೆಚ್ಚಿಸಿದೆ. ಚಿನ್ನ ಗೆದ್ದವರು 20 ಲಕ್ಷ ರೂ. ಪಡೆದರೆ, ಬೆಳ್ಳಿ ವಿಜೇತರು 14 ಲಕ್ಷ ರೂ. ಸ್ವೀಕರಿಸಲಿದ್ದಾರೆ. ಕಂಚಿನ ಪದಕಗಳನ್ನು ಗೆದ್ದವರು 8 ಲಕ್ಷ ರೂ. ಪಡೆಯಲಿದ್ದಾರೆ.